ವಿರಹ


ಮನದಲ್ಲೆಲ್ಲೋ ನೆನಪುಗಳ ಉಂಗುರ
ಮೂಡಣದ ಸೂರ್ಯ ಮಸಣದೆಡೆಗೆ

ಹೂತು ಕಣ್ಣನು ನಿನ್ನ ಬರುವಿಕೆಗೆ
ಬರಿದೆ ಬರಡಾಯಿತು ಬದುಕು

ಇನಿತಿನಿತು ಆಶಿಸಿದೆ ನಿನ್ನ
ಇನಿತಾದರು ಇದೆಯೇ ನೆನಪು ನನ್ನ

ಅತಿಯಾದುದಲ್ಲ ಎನ್ನ ಬಯಕೆ
ಜೊತೆಯಾಗಲು ಒಲ್ಲೆ ನೀ ವನಿತೆ

ಜೀವ ಹಿಂಡುತಿದೆ ನೆನಪು
ವದ್ದೆಯಾಗಿದೆ ಹೃದಯ

ಮೆಟ್ಟಿಯಾದರೂ ಹೋಗು ಒಮ್ಮೆ
ಇರಲಿ ಅದರ ಗುರುತು ಎನಗೆ

ಅಮ್ಮ...... ನಾನೇಕೆ ಹೀಗೆ?


ಜನಿಸಿದ ಗಳಿಗೆ ನಾನತ್ತೆ,
ಕಣ್ಣಂಚಿನಲಿ ಹನಿ ನೀರ ಇಟ್ಟು.....

ನೀನಕ್ಕೆ!!!!!

ಹಸಿದು ಜೀವ ಬಯಸೆ ಜೇನ,
ಎದೆಯಾಮೃತವ ಬಸಿದು ಕೊಟ್ಟು.....

ನೀನಕ್ಕೆ!!!!!


ಎದ್ದು ಮುಂಜಾವಿನಲಿ ಮೊದ್ದು ಮಾತಾಡಲು,

ಮನದಿ ಹಾಡ ಗುನುಗುವುದ ಬಿಟ್ಟು.....
ನೀನಕ್ಕೆ!!!!!

ಪಟ್ಟು ಬಿಡದೆ ನಡೆದು ಬಿದ್ದೆ,
ಕಣ್ಣ ತೇವದಿ, ಮಾಡಿ ಮುದ್ದ.....
ನೀನಕ್ಕೆ!!!!!

ಬಳಿಕ ಗೆದ್ದೆನೆಂಬ ನನ್ನ ಹಮ್ಮ,

ತನ್ನ ಗೆಲಿವುಯೆಂದು ಹೆಮ್ಮೆಯಿಂದ.....
ನೀನಕ್ಕೆ!!!!!

ಈಗ......


ಸೋತ ಜೀವ ಬೇಡೆ ಸನಿಹ,

ಸರಿದೆ ದೂರ ಬಿಟ್ಟು ಕರುಳ ನಾನೆತ್ತ.....?
ನೀನತ್ತೆ!!!!
!


ಕೆಲವೊಮ್ಮೆ ಬೇಡದ ಮುದಿ ಜೀವಗಳನ್ನು ನೋಡಿದಾಗ ಹೀಗನಿಸಿದ್ದು....
ನಾವು ಹೀಗೇಕೆ........?
ಬಸಿದ ಜೀವಗಳಿಗೆ ನಮ್ಮ ಚೈತನ್ಯ ತುಂಬಲು ಹಿಂದೆ-ಮುಂದೆ ನೋಡುವುದೇಕೆ?

ಇನ್ನೇನ ಬಿಡಲಿ...?



ಹುಟ್ಟೂರ ಬಿಟ್ಟೆ,
ಹುಟ್ಟು ಗುಣವ ಬಿಟ್ಟೆ,
ತಿಳಿದ ಬಯಕೆ ಬಿಟ್ಟೆ,
ತೀರದ ಆಸೆ ಬಿಟ್ಟೆ,
ಕನಸ ಕಾಣುವುದ ಬಿಟ್ಟೆ,
ಕನಸಲಿ ಬರುವುದ ಬಿಟ್ಟೆ,
ನಗುವುದ ಬಿಟ್ಟೆ,
ನಗಿಸುವುದ ಬಿಟ್ಟೆ,
ನಿನ್ನೊಲಿಸಲು ಇನ್ನೇನ ಬಿಡಲಿ?
ಇರುವುದೊಂದು ಜೀವ.....
ಬಿಡೆನು ನಿನ್ನ ನೆನಪ...............

ಅದೊಂದು ರಾತ್ರಿ......

ಬರೆಯದೇ ಜಿಡ್ಡು ಹಿಡಿದಿದೆ....ಆದರೂ ಬರೆಯಲು ಏನೂ ಹೊಳೆಯುತ್ತಿಲ್ಲ....ಇನ್ನು ತಾಳಲಾರೆ ಎಂದು, ನನ್ನ ಚಿಕ್ಕಮ್ಮನ ಮಗನಿಗಾದ ಒಂದು ತಮಾಷೆಯ ಅನುಭವವನ್ನು ಇಲ್ಲಿ ಬರೆಯುವ ಪ್ರಯತ್ನ.ಅವನ ಮಾತುಗಳಲ್ಲಿ ಓದಿಕೊಳ್ಳಿ.




ನಾನು ಸುಮಾರು 5-6 ನೇ ಕ್ಲಾಸಿನಲ್ಲಿ ಓದುತ್ತಿರುವ ಕಾಲ ಇರಬೇಕು.ರಜೆಯಲ್ಲಿ ದೊಡ್ಡಾಯಿಯ ಮನೆಗೆ ಹೋಗಿದ್ದೆ.

ಅವರದು ಕರಾವಳಿ ತೀರದ ಊರು....ಬೇಸಿಗೆಯಲ್ಲಿ ತೀರದ ದಾಹ,ಬೆವರು.ಆದರೂ.....ನನಗೇಕೋ ಅಲ್ಲಿ ಕಾಲ ಕಳೆಯುವುದೆಂದರೆ ಬಲು ಇಷ್ಟ.


ದೊಡ್ದಾಯಿಯ
ಕೈಯ್ಯಿನ ಅಡುಗೆ,ಮಕ್ಕಳ ಜೊತೆಗೆ ಆಟ,ಸಂಜೆ ಹೊತ್ತಿನ ಸಮುದ್ರದಂಚಿನ ತಿರುಗಾಟ,ಕದ್ದು ಮಾವಿನ ಹಣ್ಣನ್ನು ತಿನ್ನುವದು....ಮಧ್ಯ..ಮಧ್ಯ ದೊಡ್ಡಪ್ಪನ ಕೀಟಲೆ,ಬೈಗುಳ ಒಂದೇ ಎರಡೇ....ಕಾಲ ಕಳೆದಿದ್ದೇ ತಿಳಿಯುತ್ತಿರಲಿಲ್ಲ.



ಅದೂ ಅಲ್ಲದೆ ದೊಡ್ದಾಯಿಯ ಧ್ವನಿ ನನ್ನ ಆಯಿ ಮಾತನಾಡುವಂತೆ ಕೇಳುತಿದ್ದುದರಿಂದಲೋ ಏನೋ...ನನಗೆ ನನ್ನ ಆಯಿಯ ಹತ್ತಿರ ಇರುವ ಅನುಭವ....(ಚಿಕ್ಕ ಮಕ್ಕಳಿಗೆ ಕೆಲವೊಬ್ಬರು,ಕೆಲವಷ್ಟು ಇಷ್ಟವಾಗುವದಕ್ಕೆ ತಕ್ಕ ಕಾರಣಗಳಿರುತ್ತವೆ ಎನ್ನುವದು ಸತ್ಯ)

ನನ್ನ ದೊಡ್ದಪ್ಪನದು ಪೌರೋಹಿತ್ಯ ವೃತ್ತಿ.ಅದು ಅವರ ಅಜ್ಜ ಶಂಕರ ಭಟ್ಟರ ಕಾಲದಿಂದಲೂ ನಡೆದುಕೊಂಡು ಬಂದ ಜೀವನಾಧಾರ.ಮದುವೆ,ಮುಂಜಿ,ಶಾಂತಿ,ಮೀ
ನು ಹಿಡಿಯಲು ಹೋಗುವ ಮೊದಲು ದೋಣಿ ಪೂಜೆ ಮಾಡುವದು....ಹೀಗೆ ಹಲವಾರು ವಿಧ.ಇವೆಲ್ಲದರ ಜೊತೆಗೆ ಮನೆಯಲ್ಲಿ ಇದ್ದಷ್ಟು ಹೊತ್ತು ಬಂದ ಜನರಿಗೆ ಭವಿಷ್ಯ ಹೇಳುವದು,ಅವರ ತೊಂದರೆಗಳಿಗೆ ಮಂತ್ರಿಸಿ ಕೊಡುವದು ಜಪ ಮಾಡಿ ಕೊಡುವದು ಬೇರೆ.



ಅದನ್ನು ಅಲ್ಲೇ ಪಕ್ಕದಲ್ಲಿ ನಿಂತು ನೋಡುವದು ಒಂದು ರೀತಿಯ ಮಜ.ಅಜ್ಜ,ದೊಡ್ಡಪ್ಪ ಆ ಚಿಕ್ಕ ಮರದ ಮಣೆಯ ಮೇಲೆ ಅದೇನೋ ಬಳ್ಳಿ,ಎಲೆ,ಲಿಂಬೆ ಹಣ್ಣನ್ನು ಇಟ್ಟು ಕೊಟಕ್.......ಕೊಟಕ್..... ಎಂದು ಕತ್ತರಿಸುತ್ತಿದ್ದರೆ ಸ್ವಲ್ಪ ಹೆದರಿಕೆಯೂ ಕೂಡಾ.ಆದರೆ ಬರುವ ಜನರು ಭಟ್ಟರ ಮಕ್ಕಳಿಗೆ ಎಂದು ತರುವ ಚಾಕಲೇಟಿನ ಆಸೆಯಾಗಿ ಅಲ್ಲೇ ನಿಲ್ಲುತ್ತಿದ್ದೆವು.ಕೈಗೆ ಸಿಕ್ಕ ತಕ್ಷಣ ಒಂದೇ ಓಟ...



ಆ ಸಲ ಅವರ ಮನೆಯ ನೆಂಟರ ಮಕ್ಕಳೂ ಬಂದಿದ್ದರು.ರಾತ್ರಿ ನಮ್ಮ ಮಕ್ಕಳ ಪಂಗಡ ಹೊಳ್ಳಿಯ(ಹೊರಗಡೆಯ ವರಾಂಡ) ಮೇಲೆ ಮಾತನಾಡುತ್ತಾ,ಮೆಲ್ಲಗೆ ಕಿಸಿ-ಕಿಸಿ ನಗುತ್ತ ಮಲಗುವದು ವಾಡಿಕೆ.ಚಿಕ್ಕವನಾದುದರಿಂದ ಯಾವತ್ತೂ ದೊಡ್ದಾಯಿಯ ಜೊತೆಗೆ ಮಲಗುವ ನಾನು, ಉಮೇದಿನಲ್ಲಿ ಹೊರಗೆ ಮಲಗುವ ಯೋಚನೆ ಮಾಡಿದೆ.



ಆದರೆ ಎಲ್ಲರಿಗಿಂತ ಚಿಕ್ಕವನಾದ ನನ್ನನ್ನು,ಅದೇಕೊ ಅವರೆಲ್ಲರೂ ಸ್ವಲ್ಪ ದೂರ ಅಂದರೆ ಬಾಗಿಲ ಇನ್ನೊದು ಪಕ್ಕ ಮಲಗಲು ಬಿಟ್ಟರು.ಆ ಕಡೆ 2-3 ಜನ ಈ ಕಡೆಗೆ ನಾನು ಒಬ್ಬನೇ.



ಅದು ನನ್ನ ದೊಡ್ಡಪ್ಪನ ಕಾರ್ಯ ಬಾಹುಳ್ಯದ ಜಾಗವೂ ಹೌದು. ನನ್ನ ಪಕ್ಕದಲ್ಲೇ ಅವರ ನೋಟ ನೋಡುವ ಮಣೆ,ಕವಡೆ,ಪಂಚಾಂಗ ಇತರ ಪರಿಕರಗಳು ಇದ್ದವು.



ಹೊರಗೆ ಬಂದು ಆಗಿತ್ತು ಈಗ ನಾನೊಬ್ಬನೇ ಅಲ್ಲಿ ಮಲಗುವುದಿಲ್ಲವೆನ್ನಲು ಅದೇನೋ ಹಿಂಜರಿಕೆ,ನಾಚಿಕೆ,ಹೆದರುಪುಕ್ಕ ಎಂದು ನಕ್ಕರೆ?.ಅದಕ್ಕಿಂತ ಇದೇ ಲೇಸು ಎಂದು ರಾಮ ಜಪ ಮಾಡುತ್ತಾ ಕಣ್ಣು ಮುಚ್ಚಿದೆ.ಯಾವಾಗಲೋ ನಿದ್ದೆ ಬಂದಿರಬೇಕು ಅದೂ ಅರೆಬರೆ.ಸ್ವಲ್ಪ ಹೊತ್ತಿನಲ್ಲಿ ಏನೋ ಶಬ್ಧ.


"ಕಟಕ್...ಕೊಟಕ್....ಕಟಕ್".


ನಿದ್ದೆಗಣ್ಣು...ಮೊದಲಿನ ಹೆದರಿಕೆ ಬೇರೆ,ಥಟ್ಟನೆ ಎಲ್ಲಿದ್ದೇನೆಂದು ತಿಳಿಯದ ಪರಿಸ್ಥಿತಿ.ಮತ್ತೆ ಅದೇ ಶಬ್ಧ.....



"
ಕಟಕ್...ಕೊಟಕ್....ಕಟಕ್........
ಕಟಕ್...ಕೊಟಕ್....ಕಟಕ್".



ಎಲ್ಲಿ ನೋಡಿದರೂ ಕತ್ತಲೆ,ಜೊತೆಗೆ ನಾನೊಬ್ಬನೇ ಮಲಗಿದ್ದು....ನೆನಪಾಗಿದ್ದು ಪಕ್ಕದಲ್ಲಿದ್ದ ದೊಡ್ಡಪ್ಪನ ನೋಡಿಸುವ ಮಣೆ.....ಮೈ ಪತರಗುಟ್ಟ ತೊಡಗಿತು.



ಇನ್ನು ಇಲ್ಲೇ ಇದ್ದರೆ ನನಗೆ ಏನಾದರೊಂದು ಆಗುವದೆಂದು ಕತ್ತಲಲ್ಲೇ ತೆವಳುತ್ತ ಬಾಗಿಲಿನಿಂದ ಒಳಗೆ ಹೋದೆ.ಹೆದರಿಕೆ ನನ್ನಿಂದ ಅಷ್ಟು ಮಾಡಿಸಿತ್ತು.ಒಳಗೆ ಹೋದಾಗ ಕೈಗೆ ಏನೋ ತಗುಲಿತು.....ಮಲಗಿದ
ದೊಡ್ದಾಯಿಯ ಕಾಲು.

ಎಚ್ಚರವಾಗಿ ಅವಳು....."ಅದ್ಯಾರು ಅಂದಳು?".



"
ನಾನೆಯೇ ದೊಡ್ದಾಯಿ....ಅಂದೆ".



"
ಏನಾತೋ...? ಬಾ ನನ್ ಸಂತಿಗೆ ಮನಿಕ....." ಅಂದಳು.



ಅವಳನ್ನು ತಬ್ಬಿ ಮಲಗಿದ ನನ್ನಷ್ಟು ಸುಖಿ ಆ ರಾತ್ರಿ ಯಾರೂ ಇರಲಿಕ್ಕಿಲ್ಲ.



.........ಥೋ ಇದೇನು ಮತ್ತೆ ಶಬ್ಧ .......ಇಲ್ಲ ಯಾರೋ ಏನೋ ಹೇಳುತ್ತಿದ್ದಾರೆ ......ಸರಿಯಾಗಿ ಕಣ್ಣು ವಡೆದು ಎಚ್ಚರವಾಗಿ ನೋಡಿದರೆ ಅಕ್ಕ ಎಲ್ಲರಿಗೂ ಬೈಯ್ಯುತಿದ್ದಳು.



"ಹಂಗಾರೆ ಯಾರಿಗೂ ಹೇಳುಲ್ ಆಜಿಲ್ಯಾ?...ಹನಿ ಎಚ್ರಾನೂ ಆಜಿಲ್ಯಾ?ಒಂದ್ ಹನಿನೂ ಇಲ್ಲೇ.....ಎಲ್ಲಾ ಚೊಕ್ಕ ಮಾಡಿಕ್ ಹೋಜು.....ದರಿದ್ರ ದನಾ...."



ಇವಳು ಏನು ಹೇಳುತ್ತಿದ್ದಾಳೆ ಎಂದು ತಿಳಿಯದೆ ನಾನು....



"ಎಂತಾ ಆತೆ ಅಂಜನಕ್ಕಾ?" ಅಂದೆ.



"ಅಲ್ ನೋಡು....ರಾತ್ರೆ ಕಳ್ ದನ ಬಂದ್ಕಂಡು ಪೂರ ಹೂಗಿನ ಗೆಡಾ ಚೊಕ್ಕಮಾಡಿಕ್ ಹೋಜು....ಹೆರ್ಗ್ ಮನಿಕಂಡವು ಒಂಚೂರು ಹೇಳಿದ್ವಿಲ್ಲೆ ....ಇಲ್ಲಗಿದ್ರೆ ಬಡುಲ್ ಆಗ್ತಿತ್ತು....ನಾ ನೆಟ್ಟದ್ದು ಎಲ್ಲಾ ಹಾಳಾಗ್ ಹೋತು.ಸಾಯಲಿ ನಾ ಇನ್ ನೆಡುಲ್ ಹೋಗ್ತ್ನಿಲ್ಲೆ .ಬರೀ ದನದ್ ಬಾಯಿಗ್ ಕೊಡುಲೇ ಹದಾ ಆಗ್ತು."



ನನ್ನ ಬಿಟ್ಟ ಬಾಯಿ ಬಿಟ್ಟ ಹಾಗೆ ಇತ್ತು......



"ಹಂಗಾರೆ ರಾತ್ರೆ ಕೊಟಕ್...ಕೊಟಕ್.... ಗುಟ್ಟದ್ದು ಅದರಾ ಅವಾಜೇಯಾ......"ಬಾಯಿ ತಪ್ಪಿ ಬಂದಿತ್ತು.



"ಸತ್ತವ್ನೆ ನಿಂಗ್ ಕೇಳಿತ್ತ? ಹೇಳುಲ್ ಆಜಿಲ್ಯಾ ಹಂಗಾರೆ?....ಈಗ ಹೇಳ್ತೆ.....ಪಾಪ್ಗೆಟ್ ದನಾ ಪೂರಾ ತಿಂದ್ಕ ಹೋಗ್ ಸತ್ತತಲಾ......"ಅವಳ ಪುರಾಣ ಮುಂದುವರೆದಿತ್ತು....



ನನ್ನ ಮುಖದಲ್ಲಿ ನಗು ಮೂಡಿತ್ತು.....ರಾತ್ರಿ ಆ.... ಕಟಕ್...ಕೊಟಕ್...ಕಟಕ್....ಶಬ್ಧ...
.ದೊಡ್ಡಪ್ಪನ ಮಣೆಯದಲ್ಲ...ಅಂಜನಕ್ಕನ ಹೂವಿನ ಗಿಡಗಳನ್ನು ಹಾಳು ದನ ಕಡಿದು, ನುಂಗಿ, ನೀರು ಕುಡಿದ ಶಬ್ಧ ಎಂದು.....



ಆದರೆ ನನಗಾದ ಹೆದರಿಕೆ ಬಗ್ಗೆ ಹೇಳಿದರೆ ಎಲ್ಲಿ ನನ್ನ ಮರ್ಯಾದೆ ಹೋಗುವುದೋ ಎಂದು ಹೇಳಲು ಹೋಗಲಿಲ್ಲ....



ಎದ್ದು ಮುಖ ತೊಳೆದು ದೊಡ್ದಾಯಿ ಎರೆದ ದೋಸೆ ತಿನ್ನಲು ಹೋದೆ.



ಆದರೆ ಈಗಲೂ ನೆನಪಾದರೆ ಒಬ್ಬನೇ ಎಲ್ಲೋ ನೋಡುತ್ತಾ ನಗುತ್ತೇನೆ.........
ಬಾಲ್ಯದ ದಿನಗಳು...ಎಷ್ಟು ಸುಂದರ.

ಹೆಂಡತಿ

ಮದುವೆಯಾದ ಹೊಸದರಲ್ಲಿ,
ಏನು ಚೆಂದ,ಕಣ್ಣಿಗೆ ತಂಪು.
ಈಗೀಗ ಏಕೋ ಏನೋ,
ರುಚಿಯೂ ಇಲ್ಲ, ಬರೀ ಹಳಸಲು ಕಂಪು.-ಮರ್ಮಜ್ನ.

ಬಾ......ಗೆಳತಿ.


ಅದೇನು ಕನಸು,
ಸಾಧ್ಯವಾಗದಂಥಾದ್ದು ಚೆಲುವೆ?

ಚಂದ್ರಮನ ಅಂಶ ನೀನು,
ಬಿಡು ಬಿಡು ಬೆರಗು ಸೂರ್ಯ ನಾನು.

ಚುಮು ಚುಮು ಮುಂಜಾವಿನಲ್ಲಿ,
ಕದ್ದು ಚಿಲಿಪಿಲಿಗಳ ಕೊರಳ ಸವಿಯೋಣ ಬಾ.

ಹರಿವ ನೀರಲ್ಲಿ ಮೀನ ಸರಿಸಿ,
ಮೊಗದ ನೆರಳ ತೋರುವೆ ಬಾ.

ತೊರೆಯ ನಡುವ ಮುರಿದು ಕಾಲಲ್ಲಿ,
ಮನದಣಿಯೆ ಪಿಸುಗುಟ್ಟೋಣ ಬಾ.

ಕಡಲ ತಡಿಯಲ್ಲಿ ತಂಗಾಳಿ ಜೊತೆಯಲ್ಲಿ,
ಬಿಟ್ಟೂ ಬಿಡದೆ ಗೂಡ ಕಟ್ಟೋಣ ಬಾ.

ಜೀವನ ಸುಂದರ ನಮ್ಮಿಬ್ಬರಲ್ಲಿ,
ಜೀವ ಇಡುವೆ ಜೊತೆಯಾಗೋಣ ಬಾ.

ಬಯಕೆ


ಇಂದೇತಕೋ ತೀರದ ದಾಹ,
ಸಖಿ ನಿನ್ನ ಸ್ನೇಹ ಬೇಡಿದೆ.

ಮನ ಚಕೋರ, ಸಾಕ್ಷಿ
ಚಂದ್ರಮನೇ,
ಬಿಡು,
ಸೂರ್ಯ ಬಲು ಯಾತನೆ.

ತನು ಕಾದು ಮನ ಉಯ್ಯಾಲೆ,
ನಿನ ತಿರುವುಗಳೆಷ್ಟು? ಹುಡುಕುವಾಸೆ.

ಮೂಗಿಗಡರಿದ
ಮೈಗಂಧ,
ನವಯಾತನೆ ನರನಾಡಿಗಳಲಿ.


ಬೆಸೆವ ತುಟಿಗಳ ಜೊತೆಗೆ,

ಹೊಸೆದ ದಾರವಾಗುವಾಸೆ.


ಇದೋ!!! ನನ್ನ ಒಸಗೆ,

ಬಾ ಎದೆಯೇರು ಸುಮ್ಮಗೆ.


ಮತ್ತೆ
ಮೈ ಮನಗಳ ಮರ್ಜನ,
ಹೂ ರಾಶಿಗಳ ಮಜ್ಜನ.


ಮಥಿಸಿ ಹೆದೆಯೇರಿಸೆ ಕಾಮನ,

ನಟ್ಟಿರಿರುಳಲಿ
ಕಾಳಿಂಗ ನರ್ತನ.

ಪ್ರಣಯ


ನೀರವ ರಾತ್ರಿ,ಬಯಕೆಗಳ ಕಾದಾಟ,
ಮೈಮೇಲೆ ಕೈಗಳ ಸರಿದಾಟ,

ಅಪರಿಚಿತರಂತೆ ಪರಿಚಿತ ದೇಹಗಳ ತಡಕಾಟ.


ಸಂದಿ
ಗೊಂದಿಯೆನ್ನದ ಹುಡುಕಾಟ,
ಅದಮ್ಯ ಉತ್ಸುಕತೆಯ ಹೋರಾಟ,

ಒಬ್ಬರನ್ನೊಬ್ಬರು ಮೆಟ್ಟಿ ನಿಲ್ಲುವ ಚೆಲ್ಲಾಟ.


ಸದ್ದಿಲ್ಲದೆ ಗಮ್ಯದೆಡೆಗಿನ ಸಾಗಾಟ,

ದೇಹ ಕೆಂಡ,ಏದುಸಿರಿನ ಹಾರಾಟ,

ಸಂತ್ರಪ್ತಿಯ
ಮುಗುಳ್ನಗೆ,ಕಣ್ಣಂಚಿನ ನೀರಾಟ.

ಸಂಭಂಧಗಳು.....




















ಸುಖ-ದುಃಖದ ಆಗರ.....ಭಾವನೆಗಳ ಕಲಸು ಮೇಲೋಗರ.
ಜೋಪಾನ ಮಾಡಿದರೆ ಮಾತ್ರ ಉಳಿಯುವಂಥಾದ್ದು.ಎಳೆದರೆ ಕಿತ್ತು ಬಂದೀತು...ಜೋಕೆ.

ಅವಳು ಮುದ್ದು ನಾಲ್ಕು ವರ್ಷದ ಕಿಶೋರಿ,ತುಂಟಿ,ಮುಗ್ಧೆ ನನ್ನ ಕಣ್ಮಣಿ.ನನ್ನ ಅಕ್ಕನ ಮಗು. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ.
ನಾನು ಸಿಕ್ಕರೆ, ಬೆಳಗ್ಗೆ ಎದ್ದರೆ ಕೂರಲೂ ನನ್ನ ತೊಡೆಯೇ ಆಗಬೇಕು,ಹಲ್ಲುಜ್ಜಲೂ ನಾನೆ,ಸ್ನಾನವೂ ಮಾವನೇ ಮಾಡಿಸಬೇಕು.
ರಾತ್ರಿ...."ಜಿಂಕೆಮರಿ ನಂಗೊಂದ್ ಕಥೆ ಹೇಳಾ.ಬೆಜಾರ್ ಬಂದೋಜು.ಆ ಮೊಲದ್ದು ಹೇಳು ನಂಗ್ ಬಗೇಲ್ ಮರ್ತೋದಾಂಗ್ ಆಜು."(ಜಿಂಕೆಮರಿ ನನಗಿಟ್ಟ ಇನ್ನೊಂದು ಹೆಸರು.ಕಥೆ ಹೇಳು ಅನ್ನುವ ಪರಿ) ಅಂದರೆ ಎಷ್ಟು ನಿದ್ದೆ ಬಂದಿದ್ದರೂ ಹೇಳದೆ ಮಲಗಿದರೆ ನನಗೆ ನಿದ್ದೆ ಬರದು.

ಮೊದಲೆಂದೂ
ಹೀಗಾಗಿರಲಿಲ್ಲ.ಅವತ್ತೆಲ್ಲಾ ತಿರುಗಿ ಸುಸ್ತಾಗಿ ಮನೆಗೆ ಬಂದಿದ್ದೆವು.ಮದುವೆ ಮನೆಯಲ್ಲಿ ಅವಳದ್ದು ಓಡಾಟವೋ,ಓಡಾಟ.ತಿರುಗಿ ಕಾರಿನಲ್ಲಿ ಬರುವಾಗಲೂ ಕೀಟಲೆ ನಿಂತಿರಲಿಲ್ಲ.
ಮನೆಗೆ ಬಂದ ನಂತರ
"ತಮ್ಮಾ ನಾನು ನೀನು ಆಟಾ ಆಡ್ವನ"(ಒಮ್ಮೊಮ್ಮೆ ಅವಳು ನನ್ನನ್ನು ಹೀಗೆ ಸಂಭೋಧಿಸತ್ತಾಳೆ). ನನಗೆ ಅವತ್ತೇ ಸಾಯಂಕಾಲ ಬೆಂಗಳೂರಿಗೆ ಹೊರಡುವ ತರಾತುರಿಯಿದ್ದರೂ ಇಲ್ಲವೆನ್ನಲು ಮನಸ್ಸಾಗಲಿಲ್ಲ.ಅಂತೂ ಸ್ವಲ್ಪ ಹೊತ್ತು ಅವಳ ಜೊತೆ ಆಟವಾಡಿ ಗಡಿಬಿಡಿಯಲ್ಲಿ ತಯಾರಾಗಿ ಹೊರಡುವ ಹೊತ್ತಿಗೆ ಬಸ್ಸು ಬರುವ ಸಮಯವಾಗಿತ್ತು.
ಹೊರಟವನಿಗೆ ಬಾಗಿಲಲ್ಲೇ ಇದ್ದ ಅವಳಿಗೆ ಯಾವತ್ತಿನಂತೆ ಹೋಗಿಬರುತ್ತೇನೆ ಅಂದಾಗ.....
ಸಣ್ಣಗೆ ಹುಂ...ಅಂದವಳು ಸರ ಸರನೆ ಒಳಗೆ ಓಡಿದ್ದಳು. ಇವತ್ಯಾಕೆ ಹೀಗೆ ಎಂದು ಒಳಗೆ ಹೋದವನಿಗೆ ಕೇಳಿದ್ದು ಅವಳ ಅಳುವ ಧ್ವನಿ. "ತಂಗಿ ಎಂತಕ್ ತೀಡ್ತ್ಯೆ....ಮಳ್ಳಿ"(ತಂಗಿ ಯಾಕೆ ಅಳುತ್ತೀ) ಹೇಳುವಷ್ಟರಲ್ಲಿ ನನ್ನ ಕೊರಳು ಗಧ್ಗವಾಗಿತ್ತು.ಇನ್ನು ನಿಂತರೆ ನಾನೂ ಅಳುವದು ಖಂಡಿತ ಅಂತನಿಸಿದಾಗ ಗೇಟಿನ ಕಡೆ ನಡೆದಿದ್ದೆ.

ಅವಳ
ಅಮ್ಮ ಸೊಂಟದ ಮೇಲೆ ಕೂರಿಸಿಕೊಂಡು ಗೇಟಿನವರೆಗೂ ಬಂದು "ಇವಳಿಗೆ ಮುಂದಿನ ಭಾನುವಾರ ಮತ್ತೆ ಬರುತ್ತೇನೆಂದಾದರೂ ಹೇಳಿ ಹೋಗು.ಇಲ್ಲದಿದ್ದರೆ ಕಷ್ಟ" ಅಂದಾಗ ಮತ್ತೊಮ್ಮೆ ಬಾಯಿ ಬಿಡಬೇಕಾಯಿತು. ಏನೋ ಹೇಳಿ ಸಮಾಧಾನ ಮಾಡಿ ಹೊರಟಾಗ,ಅವಳ ದುಃಖ ಒಂದು ಸ್ಥಿಮಿತಕ್ಕೆ ಬಂದಿತ್ತು.

ಟಾಟಾ ಎಂದು ಕೈ ಆಡಿಸುತ್ತಿದ್ದವಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.......


ಹಿಂತಿರುಗಿ ನೋಡಿದ ನನಗೆ ಅಮ್ಮ-ಮಗಳು...ಮಂಜು ಮಂಜಾಗಿ ಕಾಣಿಸುತ್ತಿದ್ದರು.



ಇದೇನಾ ರಕ್ತ ಸಂಭಂಧ ಎಂದರೆ?

"ಯಾರನ್ನಾದರೂ ತುಂಬಾ ಪ್ರೀತಿಸುವದೂ ಕೊನೆಗೆ ನಮಗೇ ತೊಂದರೆ,ಮನಸ್ಸಿಗೆ ದುಃಖ್ಖ ಕೊಡುತ್ತದೆ " ಎಂಬ ನನ್ನ ಗೆಳೆಯನ ಮಾತು ನೆನಪಾಗಿತ್ತು.

ಪ್ರತಿಫಲನ
















ನೀನು ಸುಂದರ,ಗುಣಿ,ಮುಗ್ಧ,

ಎಂದ,ಜನರ ನುಡಿ ಮನಕೆ ಮುದ.
ಎದೆ ಉಬ್ಬಿ,ಗರ್ವ ಮೊಗ ತುಂಬ,
ಇದೆಲ್ಲ ನನ್ನ ಗಳಿಕೆ,ಕೃಷಿ.
ಆದರೂ ಮನದಲ್ಲೆಲ್ಲೋ ಕದಲಿಕೆ,
ಅಯೋಮಯ,ಕಳವಳ,ಒಪ್ಪದ ಮನ.
ಆಚೆ ನಿಂತು ನೋಡಿದಾಗ ಕಾಣುವುದು,
ನಾನಲ್ಲಾ,ನನ್ನೊಳಗಿನ ನೀನು.

ಬೆಡಗಿ


ಮಾತು ಮಾಣಿಕ್ಯ ,ಮೌನ ಬಂಗಾರ,

ನೋಡಿ ನಿನ್ನ ಸುಮ್ಮನಿರುವೆನೇ,
ನನ್ನ ಬಂಗಾರಾ.

ಬಳೆಯ ಕಿಣಿ ಕಿಣಿ,ಕಾಲ ಗಿಲಿ ಗಿಲಿ,
ಹ್ರದಯ ಢವ ಢವ,
ಬಯಕೆ ಎದೆಯಲಿ.

ಮನಸು
ಮಲ್ಲಿಗೆ,ಮೊಗ ಚೆಂದಿರ,

ಬಳಿಗೆ ಬರಲು,
ಮನವು ಚಿತ್ತಾರ.

ಮೂಗು ಸಂಪಿಗೆ,ಮೈಯ ಕಂಪಿಗೆ,
ದೇಹದಿಂಪಿಗೆ,
ಸೋತೆ ಮೆಲ್ಲಗೆ.

ಮಾತು ಮೆಲ್ಲಗೆ,ಮೈಯ್ಯಿ ಸೋತಿರೆ,
ಮಂಚ ಕಾದಿದೆ,
ಬಾರೆ ತೋಳಿಗೆ ನನ್ನ ಚೆಂದಿರೆ.

ಶಬರಿ



ಮುಸ್ಸಂಜೆಯಲ್ಲಿ ನಲ್ಲನಾ ಸವಿ ನೆನಪು
ಗೋಧೂಳಿ ಹರಡಿದೆ,ಮಲ್ಲಿಗೆಯ ಕಂಪು
ಮುಂಬಾಗಿಲಲ್ಲಿ ಕಾಯುವ ಸಡಗರ
ಸದ್ದು ಸದ್ದಿಗೂ ಆಸೆ ನಿನ್ನಾಗಮನ
ಪರಿತಪಿಸಿ ಸಂದ ದಿನಗಳೆಂತೊ
ತಡೆಯಲಾರದೆ ಕಾಮನಾ ಬಾಣಗಳೆಂತೊ
ಅಂದೆಂದೋ ಉಸುರಿದಾ ಮಾತುಗಳ
ಹಿಡಿಮುಶ್ಟಿ ಕಟ್ಟಿ ಎದೆಗವಚಿಕೊಂಡಿರುವೆ
ಇಂದಿಗೂ ನೆಟ್ಟ ನೋಟ,ಕಣ್ಣ ಹನಿಗಳೊಂದಿಗೆ
ಆಸೆಗಳು ಚೂರಾಗದು,ನಿಲ್ಲಿಸೆ ಹಚ್ಹುವಾ ಹಣತೆಗಳ
ನೀ ಬಂದು ನನಸಾಗಿಸು ನನ್ನೀ ಕನಸುಗಳ
ಸೂಸಿತು ನಗು ನೆನಪಾಗಿ ನಿನ್ನ ಬಾಹು ಭಂದಗಳ

ಭವಿಷ್ಯತ್ತು.



ಅದುಮಿಟ್ಟ ಭಾವನೆಗಳೊಂದಿಗೆ
ಭವಿತವ್ಯದ ಕನಸು ಕಟ್ಟಿದರೆ,
ಬದುಕು....
ಬರಡಾಗದೆ-ಮರ್ಮಜ್ಞ.

ಏಪ್ರಿಲ್ 3,ಸಂಜೆ 5 ಗಂಟೆ 38 ನಿಮಿಷ.


ಯಾವತ್ತೂ ನಾನು ಬೇಡ ಅಂದುಕೊಂದದ್ದೇ ನಡೆಯುತ್ತೆ...
ಇವತ್ತೂ ಹಾಗೇ ಆಯಿತು.ನಾನು ಮೈಸೂರ್ ನಿಂದ ಬೆಂಗಳೂರ್ ಗೆ ಬರುವ ವೋಲ್ವೋ ಹತ್ತಿದ್ದೆ.ಸ್ವಲ್ಪ ಹೊತ್ತಿಗೆ ಹೊರಟಿತು.ಟಿಕೆಟ್ ಎಲ್ಲ ಮಾಡಿದ ಕಂಡಕ್ಟರ್ ಮುಂದೆ ಬಂದು ಯಾವುದೋ ಒಂದು ಫಿಲ್ಮ್ ನ ಸಿಡಿ ಹಾಕಿದ.ಅದೇನೆನ್ನಿಸಿತೋ ದರಿದ್ರದವನಿಗೆ....ಅದನ್ನು ತೆಗೆದು "ಮುಂಗಾರು ಮಳೆ" ಹಾಕಿದ.
ಇವತ್ತಿನ ವರೆಗೂ ನೋಡಿರಲಿಲ್ಲ...ಚೆನ್ನಾಗಿಲ್ಲ ಅಂತಲ್ಲ.ಬೇರೆಯದೇ ಕಾರಣಕ್ಕೆ ನೋಡಬಾರದೆಂದುಕೊಂಡಿದ್ದೆ.

"ಏಯ್ ನಾನು ನೀನು ಹೋಗ್ ನೋಡ್ವನ" ಅಂತ ಹೇಳಿದ್ದ ನನ್ನ ಗೆಳೆಯ.ಇವತ್ತಿನ ವರೆಗೂ ಕಾದಿದ್ದೆ.
ಎರಡು ವರ್ಷವಾಯಿತು ಅವನ ಜೊತೆಗೆ ನೋಡಲು ಸಾಧ್ಯವಿಲ್ಲ ಎನ್ನುವುದೂ ಗೊತ್ತಿದೆ.......ಹೌದು ಅವನು ನಮ್ಮನ್ನಗಲಿ ಎರಡು ವರ್ಷವಾಯಿತು.
ಪಾಪಿ ಕಂಡಕ್ಟರ್ ಸರಿ ಸಂಜೆ ಹೊತ್ತಲ್ಲಿ ಹಳೆಯದೆಲ್ಲವನ್ನೂ ಕೆರೆದು ಗಾಯವಾಗುವಂತೆ ಮಾಡಿದ್ದ.ಉಹುಂ ಅವನ ನೆನಪು ಅಳಿಸಿ ಹಾಕುವಂಥದ್ದಲ್ಲ.

ಹೇಗೆ ಮರೆಯಲಿ ನಿನ್ನ,
ಹೆಜ್ಜೆ ಮೂಡಿಸಿದ ಗೆಳೆಯ.
ವದ್ದೆಯಾಗಿದೆ ಹೃದಯ,
ಮನದ ರೋದನೆಗೆ.....


ಕೊನೆಗೂ ಅವನಿಲ್ಲದೆ ನೋಡುವಂತಾಯಿತು...ಅದೂ ಅರ್ಧ ಮಾತ್ರ...ಮೈಸೂರ್ ರೋಡಿನ ಬಿ.ಹೆಚ್.ಈ.ಎಲ್ ಹತ್ತಿರ ಬಂದಾಗ,ರೋಡು ತುಂಬಿ ತುಳುಕುತ್ತಿತ್ತು.ನಮ್ಮ ಬಸ್ಸಿಗೂ ಉಸಿರು ಕಟ್ಟಿತೋ ಏನೋ,ಬಂದು ಬಿದ್ದಿತು.

ಆವಾಗ ತಾನೇ ಗಣೇಶ್ ಈ ಸಾಲನ್ನು ಹೇಳಿ ಮುಗಿಸಿದ್ದ....
"ಹೃದಯದಲ್ಲಿ ಇಷ್ಟೊಂದು ನೋವನ್ನಿಟ್ಕೊಂಡು ನಾನು ಬದ್ಕತೀನ ದೇವದಾಸು?"

ನನ್ನ ಗೆಳೆಯ ಕೂಡ ಅಷ್ಟೊಂದು ನೋವನ್ನುಂಡಿದ್ನಾ? ಗೊತ್ತಿಲ್ಲ....
ಮನದ ರೋದನೆಗೆ ಹೃದಯ ಹಸಿಯಾಗಿದ್ದಂತೂ ಸತ್ಯ.

ರೋದನೆ....




ಮನವು
ಮುಳ್ಳಾಗಿಹುದು,
ಹೃದಯವು ಒಡೆದು.
ಮನತಣಿಸುವ ಮನದನ್ನೆ ಬರಲು,
ಬರ್ಬರ ಬದುಕು ಹಸನಾಗುವುದೇ-ಮರ್ಮಜ್ಞ.