ಅದೊಂದು ರಾತ್ರಿ......

ಬರೆಯದೇ ಜಿಡ್ಡು ಹಿಡಿದಿದೆ....ಆದರೂ ಬರೆಯಲು ಏನೂ ಹೊಳೆಯುತ್ತಿಲ್ಲ....ಇನ್ನು ತಾಳಲಾರೆ ಎಂದು, ನನ್ನ ಚಿಕ್ಕಮ್ಮನ ಮಗನಿಗಾದ ಒಂದು ತಮಾಷೆಯ ಅನುಭವವನ್ನು ಇಲ್ಲಿ ಬರೆಯುವ ಪ್ರಯತ್ನ.ಅವನ ಮಾತುಗಳಲ್ಲಿ ಓದಿಕೊಳ್ಳಿ.




ನಾನು ಸುಮಾರು 5-6 ನೇ ಕ್ಲಾಸಿನಲ್ಲಿ ಓದುತ್ತಿರುವ ಕಾಲ ಇರಬೇಕು.ರಜೆಯಲ್ಲಿ ದೊಡ್ಡಾಯಿಯ ಮನೆಗೆ ಹೋಗಿದ್ದೆ.

ಅವರದು ಕರಾವಳಿ ತೀರದ ಊರು....ಬೇಸಿಗೆಯಲ್ಲಿ ತೀರದ ದಾಹ,ಬೆವರು.ಆದರೂ.....ನನಗೇಕೋ ಅಲ್ಲಿ ಕಾಲ ಕಳೆಯುವುದೆಂದರೆ ಬಲು ಇಷ್ಟ.


ದೊಡ್ದಾಯಿಯ
ಕೈಯ್ಯಿನ ಅಡುಗೆ,ಮಕ್ಕಳ ಜೊತೆಗೆ ಆಟ,ಸಂಜೆ ಹೊತ್ತಿನ ಸಮುದ್ರದಂಚಿನ ತಿರುಗಾಟ,ಕದ್ದು ಮಾವಿನ ಹಣ್ಣನ್ನು ತಿನ್ನುವದು....ಮಧ್ಯ..ಮಧ್ಯ ದೊಡ್ಡಪ್ಪನ ಕೀಟಲೆ,ಬೈಗುಳ ಒಂದೇ ಎರಡೇ....ಕಾಲ ಕಳೆದಿದ್ದೇ ತಿಳಿಯುತ್ತಿರಲಿಲ್ಲ.



ಅದೂ ಅಲ್ಲದೆ ದೊಡ್ದಾಯಿಯ ಧ್ವನಿ ನನ್ನ ಆಯಿ ಮಾತನಾಡುವಂತೆ ಕೇಳುತಿದ್ದುದರಿಂದಲೋ ಏನೋ...ನನಗೆ ನನ್ನ ಆಯಿಯ ಹತ್ತಿರ ಇರುವ ಅನುಭವ....(ಚಿಕ್ಕ ಮಕ್ಕಳಿಗೆ ಕೆಲವೊಬ್ಬರು,ಕೆಲವಷ್ಟು ಇಷ್ಟವಾಗುವದಕ್ಕೆ ತಕ್ಕ ಕಾರಣಗಳಿರುತ್ತವೆ ಎನ್ನುವದು ಸತ್ಯ)

ನನ್ನ ದೊಡ್ದಪ್ಪನದು ಪೌರೋಹಿತ್ಯ ವೃತ್ತಿ.ಅದು ಅವರ ಅಜ್ಜ ಶಂಕರ ಭಟ್ಟರ ಕಾಲದಿಂದಲೂ ನಡೆದುಕೊಂಡು ಬಂದ ಜೀವನಾಧಾರ.ಮದುವೆ,ಮುಂಜಿ,ಶಾಂತಿ,ಮೀ
ನು ಹಿಡಿಯಲು ಹೋಗುವ ಮೊದಲು ದೋಣಿ ಪೂಜೆ ಮಾಡುವದು....ಹೀಗೆ ಹಲವಾರು ವಿಧ.ಇವೆಲ್ಲದರ ಜೊತೆಗೆ ಮನೆಯಲ್ಲಿ ಇದ್ದಷ್ಟು ಹೊತ್ತು ಬಂದ ಜನರಿಗೆ ಭವಿಷ್ಯ ಹೇಳುವದು,ಅವರ ತೊಂದರೆಗಳಿಗೆ ಮಂತ್ರಿಸಿ ಕೊಡುವದು ಜಪ ಮಾಡಿ ಕೊಡುವದು ಬೇರೆ.



ಅದನ್ನು ಅಲ್ಲೇ ಪಕ್ಕದಲ್ಲಿ ನಿಂತು ನೋಡುವದು ಒಂದು ರೀತಿಯ ಮಜ.ಅಜ್ಜ,ದೊಡ್ಡಪ್ಪ ಆ ಚಿಕ್ಕ ಮರದ ಮಣೆಯ ಮೇಲೆ ಅದೇನೋ ಬಳ್ಳಿ,ಎಲೆ,ಲಿಂಬೆ ಹಣ್ಣನ್ನು ಇಟ್ಟು ಕೊಟಕ್.......ಕೊಟಕ್..... ಎಂದು ಕತ್ತರಿಸುತ್ತಿದ್ದರೆ ಸ್ವಲ್ಪ ಹೆದರಿಕೆಯೂ ಕೂಡಾ.ಆದರೆ ಬರುವ ಜನರು ಭಟ್ಟರ ಮಕ್ಕಳಿಗೆ ಎಂದು ತರುವ ಚಾಕಲೇಟಿನ ಆಸೆಯಾಗಿ ಅಲ್ಲೇ ನಿಲ್ಲುತ್ತಿದ್ದೆವು.ಕೈಗೆ ಸಿಕ್ಕ ತಕ್ಷಣ ಒಂದೇ ಓಟ...



ಆ ಸಲ ಅವರ ಮನೆಯ ನೆಂಟರ ಮಕ್ಕಳೂ ಬಂದಿದ್ದರು.ರಾತ್ರಿ ನಮ್ಮ ಮಕ್ಕಳ ಪಂಗಡ ಹೊಳ್ಳಿಯ(ಹೊರಗಡೆಯ ವರಾಂಡ) ಮೇಲೆ ಮಾತನಾಡುತ್ತಾ,ಮೆಲ್ಲಗೆ ಕಿಸಿ-ಕಿಸಿ ನಗುತ್ತ ಮಲಗುವದು ವಾಡಿಕೆ.ಚಿಕ್ಕವನಾದುದರಿಂದ ಯಾವತ್ತೂ ದೊಡ್ದಾಯಿಯ ಜೊತೆಗೆ ಮಲಗುವ ನಾನು, ಉಮೇದಿನಲ್ಲಿ ಹೊರಗೆ ಮಲಗುವ ಯೋಚನೆ ಮಾಡಿದೆ.



ಆದರೆ ಎಲ್ಲರಿಗಿಂತ ಚಿಕ್ಕವನಾದ ನನ್ನನ್ನು,ಅದೇಕೊ ಅವರೆಲ್ಲರೂ ಸ್ವಲ್ಪ ದೂರ ಅಂದರೆ ಬಾಗಿಲ ಇನ್ನೊದು ಪಕ್ಕ ಮಲಗಲು ಬಿಟ್ಟರು.ಆ ಕಡೆ 2-3 ಜನ ಈ ಕಡೆಗೆ ನಾನು ಒಬ್ಬನೇ.



ಅದು ನನ್ನ ದೊಡ್ಡಪ್ಪನ ಕಾರ್ಯ ಬಾಹುಳ್ಯದ ಜಾಗವೂ ಹೌದು. ನನ್ನ ಪಕ್ಕದಲ್ಲೇ ಅವರ ನೋಟ ನೋಡುವ ಮಣೆ,ಕವಡೆ,ಪಂಚಾಂಗ ಇತರ ಪರಿಕರಗಳು ಇದ್ದವು.



ಹೊರಗೆ ಬಂದು ಆಗಿತ್ತು ಈಗ ನಾನೊಬ್ಬನೇ ಅಲ್ಲಿ ಮಲಗುವುದಿಲ್ಲವೆನ್ನಲು ಅದೇನೋ ಹಿಂಜರಿಕೆ,ನಾಚಿಕೆ,ಹೆದರುಪುಕ್ಕ ಎಂದು ನಕ್ಕರೆ?.ಅದಕ್ಕಿಂತ ಇದೇ ಲೇಸು ಎಂದು ರಾಮ ಜಪ ಮಾಡುತ್ತಾ ಕಣ್ಣು ಮುಚ್ಚಿದೆ.ಯಾವಾಗಲೋ ನಿದ್ದೆ ಬಂದಿರಬೇಕು ಅದೂ ಅರೆಬರೆ.ಸ್ವಲ್ಪ ಹೊತ್ತಿನಲ್ಲಿ ಏನೋ ಶಬ್ಧ.


"ಕಟಕ್...ಕೊಟಕ್....ಕಟಕ್".


ನಿದ್ದೆಗಣ್ಣು...ಮೊದಲಿನ ಹೆದರಿಕೆ ಬೇರೆ,ಥಟ್ಟನೆ ಎಲ್ಲಿದ್ದೇನೆಂದು ತಿಳಿಯದ ಪರಿಸ್ಥಿತಿ.ಮತ್ತೆ ಅದೇ ಶಬ್ಧ.....



"
ಕಟಕ್...ಕೊಟಕ್....ಕಟಕ್........
ಕಟಕ್...ಕೊಟಕ್....ಕಟಕ್".



ಎಲ್ಲಿ ನೋಡಿದರೂ ಕತ್ತಲೆ,ಜೊತೆಗೆ ನಾನೊಬ್ಬನೇ ಮಲಗಿದ್ದು....ನೆನಪಾಗಿದ್ದು ಪಕ್ಕದಲ್ಲಿದ್ದ ದೊಡ್ಡಪ್ಪನ ನೋಡಿಸುವ ಮಣೆ.....ಮೈ ಪತರಗುಟ್ಟ ತೊಡಗಿತು.



ಇನ್ನು ಇಲ್ಲೇ ಇದ್ದರೆ ನನಗೆ ಏನಾದರೊಂದು ಆಗುವದೆಂದು ಕತ್ತಲಲ್ಲೇ ತೆವಳುತ್ತ ಬಾಗಿಲಿನಿಂದ ಒಳಗೆ ಹೋದೆ.ಹೆದರಿಕೆ ನನ್ನಿಂದ ಅಷ್ಟು ಮಾಡಿಸಿತ್ತು.ಒಳಗೆ ಹೋದಾಗ ಕೈಗೆ ಏನೋ ತಗುಲಿತು.....ಮಲಗಿದ
ದೊಡ್ದಾಯಿಯ ಕಾಲು.

ಎಚ್ಚರವಾಗಿ ಅವಳು....."ಅದ್ಯಾರು ಅಂದಳು?".



"
ನಾನೆಯೇ ದೊಡ್ದಾಯಿ....ಅಂದೆ".



"
ಏನಾತೋ...? ಬಾ ನನ್ ಸಂತಿಗೆ ಮನಿಕ....." ಅಂದಳು.



ಅವಳನ್ನು ತಬ್ಬಿ ಮಲಗಿದ ನನ್ನಷ್ಟು ಸುಖಿ ಆ ರಾತ್ರಿ ಯಾರೂ ಇರಲಿಕ್ಕಿಲ್ಲ.



.........ಥೋ ಇದೇನು ಮತ್ತೆ ಶಬ್ಧ .......ಇಲ್ಲ ಯಾರೋ ಏನೋ ಹೇಳುತ್ತಿದ್ದಾರೆ ......ಸರಿಯಾಗಿ ಕಣ್ಣು ವಡೆದು ಎಚ್ಚರವಾಗಿ ನೋಡಿದರೆ ಅಕ್ಕ ಎಲ್ಲರಿಗೂ ಬೈಯ್ಯುತಿದ್ದಳು.



"ಹಂಗಾರೆ ಯಾರಿಗೂ ಹೇಳುಲ್ ಆಜಿಲ್ಯಾ?...ಹನಿ ಎಚ್ರಾನೂ ಆಜಿಲ್ಯಾ?ಒಂದ್ ಹನಿನೂ ಇಲ್ಲೇ.....ಎಲ್ಲಾ ಚೊಕ್ಕ ಮಾಡಿಕ್ ಹೋಜು.....ದರಿದ್ರ ದನಾ...."



ಇವಳು ಏನು ಹೇಳುತ್ತಿದ್ದಾಳೆ ಎಂದು ತಿಳಿಯದೆ ನಾನು....



"ಎಂತಾ ಆತೆ ಅಂಜನಕ್ಕಾ?" ಅಂದೆ.



"ಅಲ್ ನೋಡು....ರಾತ್ರೆ ಕಳ್ ದನ ಬಂದ್ಕಂಡು ಪೂರ ಹೂಗಿನ ಗೆಡಾ ಚೊಕ್ಕಮಾಡಿಕ್ ಹೋಜು....ಹೆರ್ಗ್ ಮನಿಕಂಡವು ಒಂಚೂರು ಹೇಳಿದ್ವಿಲ್ಲೆ ....ಇಲ್ಲಗಿದ್ರೆ ಬಡುಲ್ ಆಗ್ತಿತ್ತು....ನಾ ನೆಟ್ಟದ್ದು ಎಲ್ಲಾ ಹಾಳಾಗ್ ಹೋತು.ಸಾಯಲಿ ನಾ ಇನ್ ನೆಡುಲ್ ಹೋಗ್ತ್ನಿಲ್ಲೆ .ಬರೀ ದನದ್ ಬಾಯಿಗ್ ಕೊಡುಲೇ ಹದಾ ಆಗ್ತು."



ನನ್ನ ಬಿಟ್ಟ ಬಾಯಿ ಬಿಟ್ಟ ಹಾಗೆ ಇತ್ತು......



"ಹಂಗಾರೆ ರಾತ್ರೆ ಕೊಟಕ್...ಕೊಟಕ್.... ಗುಟ್ಟದ್ದು ಅದರಾ ಅವಾಜೇಯಾ......"ಬಾಯಿ ತಪ್ಪಿ ಬಂದಿತ್ತು.



"ಸತ್ತವ್ನೆ ನಿಂಗ್ ಕೇಳಿತ್ತ? ಹೇಳುಲ್ ಆಜಿಲ್ಯಾ ಹಂಗಾರೆ?....ಈಗ ಹೇಳ್ತೆ.....ಪಾಪ್ಗೆಟ್ ದನಾ ಪೂರಾ ತಿಂದ್ಕ ಹೋಗ್ ಸತ್ತತಲಾ......"ಅವಳ ಪುರಾಣ ಮುಂದುವರೆದಿತ್ತು....



ನನ್ನ ಮುಖದಲ್ಲಿ ನಗು ಮೂಡಿತ್ತು.....ರಾತ್ರಿ ಆ.... ಕಟಕ್...ಕೊಟಕ್...ಕಟಕ್....ಶಬ್ಧ...
.ದೊಡ್ಡಪ್ಪನ ಮಣೆಯದಲ್ಲ...ಅಂಜನಕ್ಕನ ಹೂವಿನ ಗಿಡಗಳನ್ನು ಹಾಳು ದನ ಕಡಿದು, ನುಂಗಿ, ನೀರು ಕುಡಿದ ಶಬ್ಧ ಎಂದು.....



ಆದರೆ ನನಗಾದ ಹೆದರಿಕೆ ಬಗ್ಗೆ ಹೇಳಿದರೆ ಎಲ್ಲಿ ನನ್ನ ಮರ್ಯಾದೆ ಹೋಗುವುದೋ ಎಂದು ಹೇಳಲು ಹೋಗಲಿಲ್ಲ....



ಎದ್ದು ಮುಖ ತೊಳೆದು ದೊಡ್ದಾಯಿ ಎರೆದ ದೋಸೆ ತಿನ್ನಲು ಹೋದೆ.



ಆದರೆ ಈಗಲೂ ನೆನಪಾದರೆ ಒಬ್ಬನೇ ಎಲ್ಲೋ ನೋಡುತ್ತಾ ನಗುತ್ತೇನೆ.........
ಬಾಲ್ಯದ ದಿನಗಳು...ಎಷ್ಟು ಸುಂದರ.

13 comments:

  Anonymous

September 28, 2009 at 4:36 PM

ಹ ಹ ಹ.. ಸಕತ್ತಾಗಿದೆ ಗುರು..ಸುಂದರ ನಿರೂಪಣೆ..
ನಮ್ಮ ಬಾಲ್ಯದ ದಿನಗಳು ಎಸ್ಟು ಸುಂದರ ಅಲ್ಲವೇ?? ನೆನಪಾದಾಗೆಲ್ಲ ಇನ್ನೊಮ್ಮೆ ಬಾಲ್ಯಕ್ಕೆ ಮರಳುವ ಆಸೆಯಾಗುತ್ತದೆ..ಯಾವುದೇ ಜವಾಬ್ದಾರಿ ಇಲ್ಲದ, ಮಾನಸಿಕ ತೊಳಲಾಟ ಇಲ್ಲದಂತಹ ಆ ಬದುಕು ಎಷ್ಟು ಉತ್ತಮವಲ್ಲವೇ??

  ಮೌನಿ

September 28, 2009 at 4:43 PM

ನಿಜಕ್ಕೂ ಹೌದು....
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  Dileep Hegde

September 28, 2009 at 9:14 PM

ಮಸ್ತ್ ಇದ್ದೋ ಅನುಭವ.. ಈಗ್ಲೂ ರಾತ್ರಿ ಮಲ್ಗ್ದಾಗ ಕೊಟಕ್ ಕೊಟಕ್ ಅಂದ್ರೆ ಹೀಂಗೆ ಮಾಡ್ತ್ಯ ಮತ್ತೆ..?

  ಸಾಗರದಾಚೆಯ ಇಂಚರ

October 1, 2009 at 5:15 PM

Super, tumbaa olleya niroopane

  ಮೌನಿ

October 4, 2009 at 11:32 PM

ದಿಲೀಪ ಇಲ್ಯೋ.....
ಗುರುಮೂರ್ತಿ ಸಾರ್ ಬಂದು ಮೆಚ್ಹಿದ್ದಕ್ಕೆ ತುಂಬಾ ಧನ್ಯವಾದಗಳು....
ದಿಲೀಪಾ ನಿನ್ನ ಪ್ರೋತ್ಸಾಹಕ್ಕೆ ಧನ್ಯ.

  ದಿನಕರ ಮೊಗೇರ

October 5, 2009 at 5:58 PM

tumbaa cennagide.....nimma bhaashe kivige impu....

  ಮೌನಿ

October 8, 2009 at 12:04 AM

Tumbaa dhanyawaadagalu Dinakar aware....

  Unknown

October 11, 2009 at 11:33 PM

tumba chennagide.. aa balyada dinagalu matte barabarade :)

  ಜಲನಯನ

October 12, 2009 at 1:48 PM

Dinakar
ಗ್ರಾಮ್ಯ ಭಾಷೆ ನವಿರು ಹಾಸ್ಯ ಮತ್ತು ನಿಮ್ಮ ಕಥನದ ಶೈಲಿ ಎಲ್ಲಾ ಮೆಚುಗೆಯಾದವು..ನಿಮ್ಮ-ಹೆಂಡತಿ ಕವನ ಸಹಾ..ಚನ್ನಾಗಿದೆ..ನನ್ನ ಬ್ಲಾಗನ್ನ ಫಾಲೋ ಹಾಕಿಕೊಂಡಿರಿ ಧನ್ಯವಾದ..

  Ittigecement

October 14, 2009 at 1:32 PM

ಗುರುದಾಸ್‍ರವರೆ...

ಬಾಲ್ಯದ ನೆನಪುಗಳೇ ಹಾಗೆ...
ಬಲು ಸೊಗಸು...

ಅಂದಿನ.. ಹೆದರಿಕೆ, ಭಯ, ಮುಗ್ಧತನ....
ಈಗ ನೆನಪಾದರೆ...
ನಮ್ಮಷ್ಟಕ್ಕೇ ನಗು ಬರುತ್ತದೆ...

ಚಂದದ ಬರಹಕ್ಕೆ ಅಭಿನಂದನೆಗಳು...

  ಮೌನಿ

November 7, 2009 at 5:49 PM

ಹಮ್....ಅದು ಅಸಾಧ್ಯ ಅನ್ನುವದು ಗೊತ್ತಿದ್ದರೂ ಬಯಸುವುದು ಅದನ್ನೇ ಅಲ್ಲವೇ?
ಸುಭ್ರಮಣ್ಯ ಧನ್ಯವಾದಗಳು.
ಗುರು.

  ಮೌನಿ

November 7, 2009 at 5:52 PM

ತುಂಬಾ ಥ್ಯಾಂಕ್ಸ್ ದಿನಕರ್ ಅವರೆ...
ಹೌದು ಚೆಂದಗಿದೆ ನಿಮ್ಮ ಬ್ಲಾಗ್.
ಬಂದು ಮೆಚ್ಹಿದ್ದಕ್ಕೆ ಋಣಿ.

ಗುರು.

  ಮೌನಿ

November 7, 2009 at 5:55 PM

ಪ್ರಕಾಶಣ್ಣ ದಯವಿಟ್ಟು ಬಹುವಚನ ಬೇಡ.
ಹೌದು ಹಳೆಯದನ್ನು ನೆನಪಿಸಿಕೊಂಡರೆ ನಗಲು ಬೇರೆ ಏನೂ ಬೇಡ...ಅದೂ ಶುದ್ಧ,ಮನಸ್ಸಿನಿಂದ ನಗಬಹುದು.
ಪ್ರತಿಕ್ರಿಯೆಗೆ ಧನ್ಯವಾದಗಳು.
ಗುರು.