ಐದು....ಟಿಕೇಟ್ ಕೊಡ್ರೀ....

ನಾನು ನನ್ನ ಇಬ್ಬರು ತಮ್ಮಂದಿರು ಸಿರ್ಸಿ ಜಾತ್ರೆಗೆ ಹೊರಟಿದ್ದೆವು.....
ಹೆಚ್ಚು ಕಡಿಮೆ ಮೆಜೆಸ್ಟಿಕ್ ನಲ್ಲಿಯೇ ಜಾತ್ರೆಯ ರಷ್ ಶುರುವಾಗಿತ್ತು.ನನ್ನ ತಮ್ಮ ತಾನು ರೈಲ್ವೆಗೆ ಸೀಟ್ ಬುಕ್ ಮಾಡುತ್ತೇನೆ ಎಂದದ್ದರಿಂದ ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.ಆದರೆ ಇನ್ನೇನು ಹೊರಡಲು ಎರಡು ದಿನ ಇದೆ ಎನ್ನುವಾಗ ನೋಡೋಣ ಎಂದು ನಾನು,

"ಹಾ ಟಿಕೇಟ್ ಆತನೋ" ಎಂದು ಕೇಳಿದರೆ ಅವ....

"ಥೋ ಸಿಕ್ಕಿದ್ದಿಲ್ಯಾ ಮರಾಯಾ" ಎಂದಿದ್ದ.

ನನಗೋ, ಇವ ಇದನ್ನೇ ಮೊದಲು ಹೇಳಿದ್ದರೆ ನಾನಾದರೂ ಮಾಡುತ್ತಿದ್ದೆ ಎಂದು ಸಿಟ್ಟು ಬಂತು.ಅದೂ ಅಲ್ಲದೆ ಹಿಂದಿನ ಜಾತ್ರೆಯಲ್ಲಿ ಮಳೆಯ ಕಾರಣ ಪೂರ್ತಿ ಮಜ ಹಾಳಾದ ನೆನಪು ಬೇರೆ ತಿವಿಯುತ್ತಿತ್ತು.
ಇನ್ನೇನು ಮಾಡಲು ಸಾಧ್ಯ ಎಂದು ಶುಕ್ರವಾರ ರಾತ್ರಿ ಕ.ರಾ.ರ.ಸಂ. ದ ಯಾವುದಾದರೂ ಒಂದು ಬಸ್ ಹಿಡಿದು ಹೋದರಾಯಿತು ಎಂದು ಮೆಜೆಸ್ಟಿಕ್ ಗೆ ಹೋದೆವು.


ಅಂತೂ ಇಂತೂ ಹತ್ತು, ಹನ್ನೆರಡು ಬಸ್ ವಿಚಾರಿಸಿದ ಮೇಲೆ "ಲಿಂಗನಮಕ್ಕಿಗೆ" ಹೋಗುವ "ರಾಜಹಿಂಸೆ" ಬಸ್ ನಲ್ಲಿ ಹಿಂದಿನ ಮೂರು ಸೀಟ್ ಖಾಲಿ ಇರುವದು ತಿಳಿದು, ಸಾಗರದ ವರೆಗಿನ ಟಿಕೇಟ್ ಪಡೆದು ಜಾಗ ಹಿಡಿದೆವು.ಅಬ್ಬ ಇಂಥ ಸಮಯದಲ್ಲಿ ಊರಿಗೆ ಹೋಗುವದೂ ಸಾಕು ಈ ಕಷ್ಟವೂ ಸಾಕು ಅನ್ನಿಸಿಬಿಟ್ಟಿತು.
ಅಲ್ಲಿಂದಿಲ್ಲಿಗೂ ಬಸ್ಸಿನ ಟಾಪನ್ನು ತಲೆಯಿಂದ ಮುಟ್ಟುತ್ತಾ ಬಂದಿದ್ದೇ ಆಯಿತು.


ಮನೆಯಲ್ಲಿ ಮನೆಯವರ ಬಾಯಿಂದ ಜಾತ್ರೆಯ ಬಗ್ಗೆ ಅದೂ ಇದೂ ತಿಳಿಯುತ್ತ ಸಂಜೆ ಸುಮಾರು ಹತ್ತು-ಹನ್ನೆರಡು ಜನ ಜೊತೆಗೂಡಿ ಪೇಟೆಗೆ ಹೊರಟೇ ಬಿಟ್ಟೆವು.
"ಈ ಸಲ ಜಾತ್ರೆಯಲ್ಲಿ ತುಂಬಾ ರಶ್ಶು"
ಎನ್ನುವದು ಕೇಳಿದ್ದೆವು.ಆದರೆ ಅದೆಷ್ಟು ಅನ್ನುವದು ಅಲ್ಲಿ ಹೋದಾಗಲೇ ತಿಳಿದದ್ದು."ದೇವೀಕೆರೆ" ಕ್ರಾಸ್ ನಿಂದ "ಮಾರಿ ಚಪ್ಪರ"ದವರೆಗೆ ಸುಮಾರು ಒಂದು ಕಿಲೋಮೀಟರ್ ನಡೆಯಲು ಬರೋಬ್ಬರಿ ಮುಕ್ಕಾಲು ಗಂಟೆ ಬೇಕಾಯಿತು.ಅದು ಬೇರೆ ಮಕ್ಕಳು ಮನೆಯ ಹೆಂಗಸರು ಎಲ್ಲರನ್ನು ಸಂಭಾಳಿಸಿಕ್ಕೊಳ್ಳುತ್ತ. ಅಂತೂ ಇಂತು ಮಾರಿಕಾಂಬೆಗೆ ದೂರದಿಂದಲೇ ಕೈಮುಗಿದು...ಮಾಣಿಗೆ,ಕೂಸಿಗೆ ಅದು ಇದು ಖರೀದಿ ಮಾಡಿ, ಒಂದು ರುಮಾಲ್ ರೋಟಿ ತಿನ್ನುವಷ್ಟರಲ್ಲಿ
12ಗಂಟೆ ಆಗಿತ್ತು.ಮನೆಯವರೆಲ್ಲರ ಉಮೇದು ಮುಗಿಯುತ್ತ ಬಂದಿತ್ತು.


ಗಂಡಸರು "ಈ ಹೆಂಗ್ಸ್ರಾ ಕಟ್ಗ ಬಂದ್ರೆ ಇದೇ ಕಥೆ.ಬೇಗ್ ಬೇಗ್ ಬತ್ವೂ ಇಲ್ಲೆ,ಖರೀದಿ ಮಾಡುಲ್ ನಿಂತ್ರೆ ತಾಸ್ ಗಟ್ಲೆ ಮಾಡ್ತೊ" ಎಂಬ ಪುಕಾರು ಬೇರೆ.
ಅಂತೂ ಆ ದಿನದ ಜಾತ್ರೆ ಹಾಗೆ ಮುಗಿದಿತ್ತು.ಗಂಡಸರು,ಹುಡುಗರು ಆಗಲೇ ನಿಶ್ಚಯಿಸಿ ಬಿಟ್ಟಿದ್ದರು ನಾಳೆ ಯಾವ ಹೆಂಗಸರನ್ನೂ ಕರೆತರುವದು ಬೇಡಾ ಎಂದು.


ಮರುದಿನ ನಮ್ಮ ಐದಾರು ಜನರ ಟೋಳಿ ಹೊರಟಿತ್ತು ಸ್ವಲ್ಪ ಬೇಗ.ಅರ್ಧ ತಾಸಿಗೆಲ್ಲ ಮಾರಿದೇವಿಯ ಮುಂದೆ.ಅಲ್ಲಿಂದ ಮೊದಲೇ ನಿಶ್ಚಯಿಸಿದವರಂತೆ ದೋಣಿ ಹತ್ತಲು ಹೋದೆವು.

"ಹಾ ಎಲ್ಲಾ ಹಿಂದೆ ನಿತ್ಕಂಬನ ಮಜಾ ಬತ್ತು"

ಎಂದ ನನ್ನ ತಮ್ಮಂದಿರ ಅನುಭವದ ಮಾತುಗಳ ಮುಂದೆ ಎರಡಾಡದೆ ಹತ್ತಿ ನಿಂತೆವು.ಅಲ್ಲಿ ಕೂಗಿದ ಹೊಡೆತಕ್ಕೆ ಕೆಳಗಿಳಿಯುವ ಮೊದಲೇ ನಮ್ಮೆಲ್ಲರ ಧ್ವನಿ ಅರ್ಧ ಸತ್ತಿತ್ತು.

"ಸರಿ ಮುಂದೆ ಎಂತದಾ" ಎಂದ ಒಬ್ಬನ ಪ್ರಶ್ನೆಗೆ


" ತೊಟ್ಲು" (ಜಾಯಿಂಟ್ ವ್ಹೀಲ್) ಎನ್ನುವ ಉತ್ತರ ರೆಡಿಯಾಗಿತ್ತು.....


ಒಬ್ಬರ ಬೆನ್ನು ಒಬ್ಬರು ಕೈಯ್ಯಿಂದ ಹಿಡಿದು ಮತ್ತೆ ಅದೇ ಸಣ್ಣ ಮಕ್ಕಳ "ರೈಲಿನಂತೆ" ಮಾಡಿಕೊಂಡು ಅತ್ತ ಕಡೆ ಹೊರಟೆವು.
ಅಲ್ಲೋ ನಾವು ಕಾಲು ಬಿಟ್ಟು ನಿಂತರೂ ನಮ್ಮನ್ನು ಅಲ್ಲಿಗೆ ತಲುಪಿಸುವಷ್ಟು ಜನಜಂಗುಳಿ ತುಂಬಿತ್ತು.ಹಾಗೂ ಹೀಗೂ ನಾನು ಟಿಕೇಟ್ ಕೌಂಟರಿನ ಪಕ್ಕ ಹೋಗಿ ನಿಂತೆ.


ಒಂದು ಟಿಕೇಟ್ ಗೆ 30ರೂ ನಂತೆ ಲೆಖ್ಖ ಮಾಡಿ ಐದು ಜನರಿಗೆ ಎಂದು 100ರ ಎರಡು ನೋಟು ಹಿಡಿದು...


"5ಟಿಕೇಟ್ ಕೊಡಿ" ಎಂದು ಕೂಗಿದೆ


ಅವನೋ ಹಿಂದಿಯವನು.... "ಆ...ಕಿತ್ನಾ?" ಅಂದ.


ಆ ಮೈಕ್ ಗಳ ಅಬ್ಬರಾಟದಲ್ಲಿ ಹಾಗೂ ಸ್ವಲ್ಪ ಹೊತ್ತಿನ ಮೊದಲು ಕೂಗಿ ಕಳೆದುಕೊಂಡ ನನ್ನ ಧ್ವನಿ ಇವನಿಗೆ ಕೇಳಿಸಲಿಲ್ಲವೆಂದು ಈ ಸಲ ಸ್ವಲ್ಪ ಜೋರಾಗಿಯೇ.....ನನ್ನ ಎಡಗೈಯ್ಯನ್ನು ಅಗಲಿಸಿ

"ಪಾಂಚ್.....ಪಾಂಚ್." ಎಂದೆ.


ಈ ಸಲ ಅವನಿಗೆ ತಿಳಿಯಿತಿರಬಹುದು,

"ಬೀಸ್ ರುಪಯೆ ಛುಟ್ಟಾ ದೇನಾ" ಎಂದ.


ನಾನು, ಹಾಗಾದರೆ ಒಂದು ಟಿಕೇಟ್ ಗೆ ಎಷ್ಟು ಹಣ ಎಂದು ಅನುಮಾನಿಸುತ್ತಲೇ 20ರೂ ಗಳನ್ನು ತೆಗೆದು ಕೊಟ್ಟೆ.
ಅವನು ಪಟಕ್ಕನೆ ಇಸುದುಕೊಂಡು ಟಿಕೇಟ್ಟು ಹಾಗೂ ಚಿಲ್ಲರೆ ಕೊಟ್ಟ.
ತೆಗೆದುಕೊಂಡು ನೋಡಿದರೆ 4ಟಿಕೇಟ್ ನ ಜೊತೆಗೆ 100ರೂನ ನೋಟನ್ನು ಹಿಂತಿರುಗಿಸಿದ್ದ.
ಅರೇ ಇವ್ನಾ "ಐದು" ಕೊಡು ಅಂದರೆ "ನಾಲ್ಕೇ" ಕೊಟ್ಟನಲ್ಲ ಎಂದು ಸಿಟ್ಟು ಬಂತು.
ಇನ್ನೇನು ಕೂಗಿ ಬೈಯ್ಯಬೇಕು ಎಂದು ಬಾಯಿ ತೆರೆಯುವಷ್ಟರಲ್ಲಿ ನನಗೇ ನಗು ಬರಲು ಶುರುವಾಯಿತು.ನಾನು ಹಿಂತಿರುಗಿ...

"ತಮ್ಮಾ...ಅವಾ ಪಶಿ ಬಿದ್ನೋ" ಅಂದೆ.


ನನ್ನ ತಮ್ಮ ಇದ್ದವನು "ಎಂತಕ್ಕೋ" ಅಂದ.


"ಹಾ.... ನಾನು ಎಡಗೈಯ್ಯಿ ತೋರ್ಸಿ ಐದ್ ಟಿಕೇಟ್ ಕೊಡು ಅಂದ್ನಲ, ಅವಾ ನಾಕ್ ಟಿಕೇಟ್ ಕೊಟ್ನೋ"
ಅಂದಿದ್ದೇ ತಡ ನನ್ನ ತಮ್ಮನೂ ದೊಡ್ಡದಾಗಿ ನಗಲು ಶುರು ಮಾಡಿದ.


ಕಾರಣವಿಷ್ಟೆ.....
ನನ್ನ ಎಡಗೈಯ್ಯಿನ ಕಿರು ಬೆರಳಿಗೆ ಎರಡು ವರ್ಷಗಳ ಹಿಂದೆ ಆಪರೇಷನ್ ಆಗಿ ಅದು ಈಗ ಮಡಚಿದ ಹಾಗೆ ಕಾಣುತ್ತದೆ.
ಆ ಟಿಕೇಟ್ ಕೊಡುವವನದೂ ತಪ್ಪಿಲ್ಲ ನಾನು ಎಡಗೈ ತೋರಿಸಿ....
"ಐದು" ಕೊಡು ಅಂದಾಗ ಕಂಡಿದ್ದು "ನಾಲ್ಕೇ" ಬೆರಳುಗಳು......

ಆ ನಂತರ ಪುನಃ ಬಲಗೈಯ್ಯನ್ನು ತೋರಿಸಿ


"ಪಾಂಚ್.....ಪಾಂಚ್..... ಬೋಲಾಥಾ"

ಎಂದು ಹೇಳಿ ಇನ್ನೊಂದು ಟಿಕೇಟ್ ಪಡೆದುಕೊಂಡು ತೊಟ್ಲು ಹತ್ತುವವರೆಗೂ ಹೇಳಿಕೊಂಡು ನಗುತ್ತಲೇ ಇದ್ದೆವು

ಹತ್ತಿದ ಮೇಲೆ ಮತ್ತೆ ಅದೇ

"ಹೋ....." ಎಂದು ಗಂಟಲು ಹರಿದು ಹೋಗುವಂತೆ ಕೂಗಿದ್ದು..........