ಪ್ರಣಯ


ನೀರವ ರಾತ್ರಿ,ಬಯಕೆಗಳ ಕಾದಾಟ,
ಮೈಮೇಲೆ ಕೈಗಳ ಸರಿದಾಟ,

ಅಪರಿಚಿತರಂತೆ ಪರಿಚಿತ ದೇಹಗಳ ತಡಕಾಟ.


ಸಂದಿ
ಗೊಂದಿಯೆನ್ನದ ಹುಡುಕಾಟ,
ಅದಮ್ಯ ಉತ್ಸುಕತೆಯ ಹೋರಾಟ,

ಒಬ್ಬರನ್ನೊಬ್ಬರು ಮೆಟ್ಟಿ ನಿಲ್ಲುವ ಚೆಲ್ಲಾಟ.


ಸದ್ದಿಲ್ಲದೆ ಗಮ್ಯದೆಡೆಗಿನ ಸಾಗಾಟ,

ದೇಹ ಕೆಂಡ,ಏದುಸಿರಿನ ಹಾರಾಟ,

ಸಂತ್ರಪ್ತಿಯ
ಮುಗುಳ್ನಗೆ,ಕಣ್ಣಂಚಿನ ನೀರಾಟ.

ಸಂಭಂಧಗಳು.....




















ಸುಖ-ದುಃಖದ ಆಗರ.....ಭಾವನೆಗಳ ಕಲಸು ಮೇಲೋಗರ.
ಜೋಪಾನ ಮಾಡಿದರೆ ಮಾತ್ರ ಉಳಿಯುವಂಥಾದ್ದು.ಎಳೆದರೆ ಕಿತ್ತು ಬಂದೀತು...ಜೋಕೆ.

ಅವಳು ಮುದ್ದು ನಾಲ್ಕು ವರ್ಷದ ಕಿಶೋರಿ,ತುಂಟಿ,ಮುಗ್ಧೆ ನನ್ನ ಕಣ್ಮಣಿ.ನನ್ನ ಅಕ್ಕನ ಮಗು. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ.
ನಾನು ಸಿಕ್ಕರೆ, ಬೆಳಗ್ಗೆ ಎದ್ದರೆ ಕೂರಲೂ ನನ್ನ ತೊಡೆಯೇ ಆಗಬೇಕು,ಹಲ್ಲುಜ್ಜಲೂ ನಾನೆ,ಸ್ನಾನವೂ ಮಾವನೇ ಮಾಡಿಸಬೇಕು.
ರಾತ್ರಿ...."ಜಿಂಕೆಮರಿ ನಂಗೊಂದ್ ಕಥೆ ಹೇಳಾ.ಬೆಜಾರ್ ಬಂದೋಜು.ಆ ಮೊಲದ್ದು ಹೇಳು ನಂಗ್ ಬಗೇಲ್ ಮರ್ತೋದಾಂಗ್ ಆಜು."(ಜಿಂಕೆಮರಿ ನನಗಿಟ್ಟ ಇನ್ನೊಂದು ಹೆಸರು.ಕಥೆ ಹೇಳು ಅನ್ನುವ ಪರಿ) ಅಂದರೆ ಎಷ್ಟು ನಿದ್ದೆ ಬಂದಿದ್ದರೂ ಹೇಳದೆ ಮಲಗಿದರೆ ನನಗೆ ನಿದ್ದೆ ಬರದು.

ಮೊದಲೆಂದೂ
ಹೀಗಾಗಿರಲಿಲ್ಲ.ಅವತ್ತೆಲ್ಲಾ ತಿರುಗಿ ಸುಸ್ತಾಗಿ ಮನೆಗೆ ಬಂದಿದ್ದೆವು.ಮದುವೆ ಮನೆಯಲ್ಲಿ ಅವಳದ್ದು ಓಡಾಟವೋ,ಓಡಾಟ.ತಿರುಗಿ ಕಾರಿನಲ್ಲಿ ಬರುವಾಗಲೂ ಕೀಟಲೆ ನಿಂತಿರಲಿಲ್ಲ.
ಮನೆಗೆ ಬಂದ ನಂತರ
"ತಮ್ಮಾ ನಾನು ನೀನು ಆಟಾ ಆಡ್ವನ"(ಒಮ್ಮೊಮ್ಮೆ ಅವಳು ನನ್ನನ್ನು ಹೀಗೆ ಸಂಭೋಧಿಸತ್ತಾಳೆ). ನನಗೆ ಅವತ್ತೇ ಸಾಯಂಕಾಲ ಬೆಂಗಳೂರಿಗೆ ಹೊರಡುವ ತರಾತುರಿಯಿದ್ದರೂ ಇಲ್ಲವೆನ್ನಲು ಮನಸ್ಸಾಗಲಿಲ್ಲ.ಅಂತೂ ಸ್ವಲ್ಪ ಹೊತ್ತು ಅವಳ ಜೊತೆ ಆಟವಾಡಿ ಗಡಿಬಿಡಿಯಲ್ಲಿ ತಯಾರಾಗಿ ಹೊರಡುವ ಹೊತ್ತಿಗೆ ಬಸ್ಸು ಬರುವ ಸಮಯವಾಗಿತ್ತು.
ಹೊರಟವನಿಗೆ ಬಾಗಿಲಲ್ಲೇ ಇದ್ದ ಅವಳಿಗೆ ಯಾವತ್ತಿನಂತೆ ಹೋಗಿಬರುತ್ತೇನೆ ಅಂದಾಗ.....
ಸಣ್ಣಗೆ ಹುಂ...ಅಂದವಳು ಸರ ಸರನೆ ಒಳಗೆ ಓಡಿದ್ದಳು. ಇವತ್ಯಾಕೆ ಹೀಗೆ ಎಂದು ಒಳಗೆ ಹೋದವನಿಗೆ ಕೇಳಿದ್ದು ಅವಳ ಅಳುವ ಧ್ವನಿ. "ತಂಗಿ ಎಂತಕ್ ತೀಡ್ತ್ಯೆ....ಮಳ್ಳಿ"(ತಂಗಿ ಯಾಕೆ ಅಳುತ್ತೀ) ಹೇಳುವಷ್ಟರಲ್ಲಿ ನನ್ನ ಕೊರಳು ಗಧ್ಗವಾಗಿತ್ತು.ಇನ್ನು ನಿಂತರೆ ನಾನೂ ಅಳುವದು ಖಂಡಿತ ಅಂತನಿಸಿದಾಗ ಗೇಟಿನ ಕಡೆ ನಡೆದಿದ್ದೆ.

ಅವಳ
ಅಮ್ಮ ಸೊಂಟದ ಮೇಲೆ ಕೂರಿಸಿಕೊಂಡು ಗೇಟಿನವರೆಗೂ ಬಂದು "ಇವಳಿಗೆ ಮುಂದಿನ ಭಾನುವಾರ ಮತ್ತೆ ಬರುತ್ತೇನೆಂದಾದರೂ ಹೇಳಿ ಹೋಗು.ಇಲ್ಲದಿದ್ದರೆ ಕಷ್ಟ" ಅಂದಾಗ ಮತ್ತೊಮ್ಮೆ ಬಾಯಿ ಬಿಡಬೇಕಾಯಿತು. ಏನೋ ಹೇಳಿ ಸಮಾಧಾನ ಮಾಡಿ ಹೊರಟಾಗ,ಅವಳ ದುಃಖ ಒಂದು ಸ್ಥಿಮಿತಕ್ಕೆ ಬಂದಿತ್ತು.

ಟಾಟಾ ಎಂದು ಕೈ ಆಡಿಸುತ್ತಿದ್ದವಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.......


ಹಿಂತಿರುಗಿ ನೋಡಿದ ನನಗೆ ಅಮ್ಮ-ಮಗಳು...ಮಂಜು ಮಂಜಾಗಿ ಕಾಣಿಸುತ್ತಿದ್ದರು.



ಇದೇನಾ ರಕ್ತ ಸಂಭಂಧ ಎಂದರೆ?

"ಯಾರನ್ನಾದರೂ ತುಂಬಾ ಪ್ರೀತಿಸುವದೂ ಕೊನೆಗೆ ನಮಗೇ ತೊಂದರೆ,ಮನಸ್ಸಿಗೆ ದುಃಖ್ಖ ಕೊಡುತ್ತದೆ " ಎಂಬ ನನ್ನ ಗೆಳೆಯನ ಮಾತು ನೆನಪಾಗಿತ್ತು.