ಅಮ್ಮ...... ನಾನೇಕೆ ಹೀಗೆ?


ಜನಿಸಿದ ಗಳಿಗೆ ನಾನತ್ತೆ,
ಕಣ್ಣಂಚಿನಲಿ ಹನಿ ನೀರ ಇಟ್ಟು.....

ನೀನಕ್ಕೆ!!!!!

ಹಸಿದು ಜೀವ ಬಯಸೆ ಜೇನ,
ಎದೆಯಾಮೃತವ ಬಸಿದು ಕೊಟ್ಟು.....

ನೀನಕ್ಕೆ!!!!!


ಎದ್ದು ಮುಂಜಾವಿನಲಿ ಮೊದ್ದು ಮಾತಾಡಲು,

ಮನದಿ ಹಾಡ ಗುನುಗುವುದ ಬಿಟ್ಟು.....
ನೀನಕ್ಕೆ!!!!!

ಪಟ್ಟು ಬಿಡದೆ ನಡೆದು ಬಿದ್ದೆ,
ಕಣ್ಣ ತೇವದಿ, ಮಾಡಿ ಮುದ್ದ.....
ನೀನಕ್ಕೆ!!!!!

ಬಳಿಕ ಗೆದ್ದೆನೆಂಬ ನನ್ನ ಹಮ್ಮ,

ತನ್ನ ಗೆಲಿವುಯೆಂದು ಹೆಮ್ಮೆಯಿಂದ.....
ನೀನಕ್ಕೆ!!!!!

ಈಗ......


ಸೋತ ಜೀವ ಬೇಡೆ ಸನಿಹ,

ಸರಿದೆ ದೂರ ಬಿಟ್ಟು ಕರುಳ ನಾನೆತ್ತ.....?
ನೀನತ್ತೆ!!!!
!


ಕೆಲವೊಮ್ಮೆ ಬೇಡದ ಮುದಿ ಜೀವಗಳನ್ನು ನೋಡಿದಾಗ ಹೀಗನಿಸಿದ್ದು....
ನಾವು ಹೀಗೇಕೆ........?
ಬಸಿದ ಜೀವಗಳಿಗೆ ನಮ್ಮ ಚೈತನ್ಯ ತುಂಬಲು ಹಿಂದೆ-ಮುಂದೆ ನೋಡುವುದೇಕೆ?