ಹೆಂಡತಿ

ಮದುವೆಯಾದ ಹೊಸದರಲ್ಲಿ,
ಏನು ಚೆಂದ,ಕಣ್ಣಿಗೆ ತಂಪು.
ಈಗೀಗ ಏಕೋ ಏನೋ,
ರುಚಿಯೂ ಇಲ್ಲ, ಬರೀ ಹಳಸಲು ಕಂಪು.-ಮರ್ಮಜ್ನ.

ಬಾ......ಗೆಳತಿ.


ಅದೇನು ಕನಸು,
ಸಾಧ್ಯವಾಗದಂಥಾದ್ದು ಚೆಲುವೆ?

ಚಂದ್ರಮನ ಅಂಶ ನೀನು,
ಬಿಡು ಬಿಡು ಬೆರಗು ಸೂರ್ಯ ನಾನು.

ಚುಮು ಚುಮು ಮುಂಜಾವಿನಲ್ಲಿ,
ಕದ್ದು ಚಿಲಿಪಿಲಿಗಳ ಕೊರಳ ಸವಿಯೋಣ ಬಾ.

ಹರಿವ ನೀರಲ್ಲಿ ಮೀನ ಸರಿಸಿ,
ಮೊಗದ ನೆರಳ ತೋರುವೆ ಬಾ.

ತೊರೆಯ ನಡುವ ಮುರಿದು ಕಾಲಲ್ಲಿ,
ಮನದಣಿಯೆ ಪಿಸುಗುಟ್ಟೋಣ ಬಾ.

ಕಡಲ ತಡಿಯಲ್ಲಿ ತಂಗಾಳಿ ಜೊತೆಯಲ್ಲಿ,
ಬಿಟ್ಟೂ ಬಿಡದೆ ಗೂಡ ಕಟ್ಟೋಣ ಬಾ.

ಜೀವನ ಸುಂದರ ನಮ್ಮಿಬ್ಬರಲ್ಲಿ,
ಜೀವ ಇಡುವೆ ಜೊತೆಯಾಗೋಣ ಬಾ.

ಬಯಕೆ


ಇಂದೇತಕೋ ತೀರದ ದಾಹ,
ಸಖಿ ನಿನ್ನ ಸ್ನೇಹ ಬೇಡಿದೆ.

ಮನ ಚಕೋರ, ಸಾಕ್ಷಿ
ಚಂದ್ರಮನೇ,
ಬಿಡು,
ಸೂರ್ಯ ಬಲು ಯಾತನೆ.

ತನು ಕಾದು ಮನ ಉಯ್ಯಾಲೆ,
ನಿನ ತಿರುವುಗಳೆಷ್ಟು? ಹುಡುಕುವಾಸೆ.

ಮೂಗಿಗಡರಿದ
ಮೈಗಂಧ,
ನವಯಾತನೆ ನರನಾಡಿಗಳಲಿ.


ಬೆಸೆವ ತುಟಿಗಳ ಜೊತೆಗೆ,

ಹೊಸೆದ ದಾರವಾಗುವಾಸೆ.


ಇದೋ!!! ನನ್ನ ಒಸಗೆ,

ಬಾ ಎದೆಯೇರು ಸುಮ್ಮಗೆ.


ಮತ್ತೆ
ಮೈ ಮನಗಳ ಮರ್ಜನ,
ಹೂ ರಾಶಿಗಳ ಮಜ್ಜನ.


ಮಥಿಸಿ ಹೆದೆಯೇರಿಸೆ ಕಾಮನ,

ನಟ್ಟಿರಿರುಳಲಿ
ಕಾಳಿಂಗ ನರ್ತನ.