ರಸಿಕತೆ

೧. ಚಿಲಕವಿಲ್ಲದ ಬಚ್ಚಲಿನ
ಬಾಗಿಲ ಸಂದಿಯ ಹೊರಗೆ
ಕದ್ದು ನೋಡಿದ
ಕಣ್ಣುಗಳ್ಯಾರದ್ದು......?
 



೨. ಪುಷ್ಪ ಮಂದಹಾಸ,
ಜಾಜಿಯ ಘಮ,
ಬಸಿದ ಬೆವರ ಹನಿ ಹನಿಯಲ್ಲೂ
ಸೋತು ಗೆದ್ದ ನಿತ್ರಾಣ........
 



೩. ಕಳ್ಳ ಕೃಷ್ಣನ ಸುತ್ತು ಬಂದು
ಮೆಲ್ಲ ಹೆಜ್ಜೆಯ ಇಟ್ಟವಳ, ಜಡೆಯ
ಹಿಂಬದಿಯ ಬೆನ್ನ ಹುರಿಯ ಕೆಳಗೆ
ತಟ್ಟಿದ ಹೊಡೆತಕ್ಕೆ, ಮಿಂದ ನೆತ್ತಿಯೂ
ಝುಮ್ಮೆಂದಿತ್ತು....
 



೪. ಆಸೆಯ ಕೊಡ ಹೊತ್ತು,
ಹತ್ತಿರ ಬಂದವಳ, ಹಿಡಿ
ಸೊಂಟವ ಹಿಡಿದಮುಕಿ,
ಜೀಕಿದವನಿಗೆ ದಣಿವಾರಿತ್ತು,
ಮದನೆಗೆ ದಣಿವಾಗಿತ್ತು......
 



೫. ಅಡ್ಡ ಚಂದ್ರಮನ ಆಸರೆಯಲ್ಲಿ,
ನಲ್ಲ-ನಲ್ಲೆಯರ ಸಲ್ಲಾಪ,
ಚಿಗುರಿ,ಗರಿಗೆದರಿ,ಹೆದೆಯೇರಿ,
ಕಲೆತು,ಕಳಿತು,ನವಿರಾದಾಗ,
ಪುಟ್ಟ ರವಿಯ ಉದಯವಾಗಿತ್ತು....

ಬಾರದವಳು.......


ತಂಗಾಳಿಯೊಳಗಿನ ಕಂಪು
ಮನದಲೆಲ್ಲೋ ಪಿಸು ಮಾತು
ಜೇನು ಕಂಗಳ ಚೆಲುವೆ
ಮೂರು ಸಂಜೆಯ ಹೊತ್ತು
ಮನವ ಕಲಕುವೆ ಏಕೆ?


ಉಯ್ಯಾಲೆ ತೂಗಿತು ಮನಸು
ಮಗ್ಗುಲಾದವು ನೆನಪು
ತೆಕ್ಕೆ ಬಿದ್ದವು ಕನಸು
ಮಧುವು ನಿನ್ನಧರದಲ್ಲೇಕೆ?
ಸವಿವ ಹಂಬಲ ಎನಗೆ


ಮತ್ತು ತುಂಬಿದ ಕಂಗಳು
ಅದುರು ತುಟಿಗಳು
ಮುಂಗುರುಳ ಲಾಸ್ಯ
ತೆರೆ-ಮರೆಯ ಮನಸು
ಮತ್ತೇನೋ ಬಯಸಿದೆ ತನುವು



ಜರಡಿಯಾಗಿದೆ ದೇಹ
ಕಣ್ಣ ಹನಿಗಳು ಕೊರೆದು
ಹೃದಯದಲ್ಲೆಲ್ಲೋ ಕಿರು ಹಣತೆ
ಹೆಜ್ಜೆ-ಗೆಜ್ಜೆಗಳ ಬರವು

ಹುಸಿ ನಿರೀಕ್ಷೆ,ಅದೇ ಕಿರು ನಗುವು