Posted by
ಮೌನಿ
Sunday, November 14, 2010
at
12:54 AM
೧. ಚಿಲಕವಿಲ್ಲದ ಬಚ್ಚಲಿನ
ಬಾಗಿಲ ಸಂದಿಯ ಹೊರಗೆ
ಕದ್ದು ನೋಡಿದ
ಕಣ್ಣುಗಳ್ಯಾರದ್ದು......?
೨. ಪುಷ್ಪ ಮಂದಹಾಸ,
ಜಾಜಿಯ ಘಮ,
ಬಸಿದ ಬೆವರ ಹನಿ ಹನಿಯಲ್ಲೂ
ಸೋತು ಗೆದ್ದ ನಿತ್ರಾಣ........
೩. ಕಳ್ಳ ಕೃಷ್ಣನ ಸುತ್ತು ಬಂದು
ಮೆಲ್ಲ ಹೆಜ್ಜೆಯ ಇಟ್ಟವಳ, ಜಡೆಯ
ಹಿಂಬದಿಯ ಬೆನ್ನ ಹುರಿಯ ಕೆಳಗೆ
ತಟ್ಟಿದ ಹೊಡೆತಕ್ಕೆ, ಮಿಂದ ನೆತ್ತಿಯೂ
ಝುಮ್ಮೆಂದಿತ್ತು....
೪. ಆಸೆಯ ಕೊಡ ಹೊತ್ತು,
ಹತ್ತಿರ ಬಂದವಳ, ಹಿಡಿ
ಸೊಂಟವ ಹಿಡಿದಮುಕಿ,
ಜೀಕಿದವನಿಗೆ ದಣಿವಾರಿತ್ತು,
ಮದನೆಗೆ ದಣಿವಾಗಿತ್ತು......
೫. ಅಡ್ಡ ಚಂದ್ರಮನ ಆಸರೆಯಲ್ಲಿ,
ನಲ್ಲ-ನಲ್ಲೆಯರ ಸಲ್ಲಾಪ,
ಚಿಗುರಿ,ಗರಿಗೆದರಿ,ಹೆದೆಯೇರಿ,
ಕಲೆತು,ಕಳಿತು,ನವಿರಾದಾಗ,
ಪುಟ್ಟ ರವಿಯ ಉದಯವಾಗಿತ್ತು....
Posted by
ಮೌನಿ
Tuesday, March 16, 2010
at
1:50 AM

ತಂಗಾಳಿಯೊಳಗಿನ ಕಂಪು
ಮನದಲೆಲ್ಲೋ ಪಿಸು ಮಾತು
ಜೇನು ಕಂಗಳ ಚೆಲುವೆ
ಮೂರು ಸಂಜೆಯ ಹೊತ್ತು
ಮನವ ಕಲಕುವೆ ಏಕೆ?
ಉಯ್ಯಾಲೆ ತೂಗಿತು ಮನಸು
ಮಗ್ಗುಲಾದವು ನೆನಪು
ತೆಕ್ಕೆ ಬಿದ್ದವು ಕನಸು
ಮಧುವು ನಿನ್ನಧರದಲ್ಲೇಕೆ?
ಸವಿವ ಹಂಬಲ ಎನಗೆ
ಮತ್ತು ತುಂಬಿದ ಕಂಗಳು
ಅದುರು ತುಟಿಗಳು
ಮುಂಗುರುಳ ಲಾಸ್ಯ
ತೆರೆ-ಮರೆಯ ಮನಸು
ಮತ್ತೇನೋ ಬಯಸಿದೆ ತನುವು
ಜರಡಿಯಾಗಿದೆ ದೇಹಕಣ್ಣ ಹನಿಗಳು ಕೊರೆದು ಹೃದಯದಲ್ಲೆಲ್ಲೋ ಕಿರು ಹಣತೆ
ಹೆಜ್ಜೆ-ಗೆಜ್ಜೆಗಳ ಬರವುಹುಸಿ ನಿರೀಕ್ಷೆ,ಅದೇ ಕಿರು ನಗುವು
Posted by
ಮೌನಿ
Sunday, March 7, 2010
at
1:29 AM
ನಾನು ನನ್ನ ಇಬ್ಬರು ತಮ್ಮಂದಿರು ಸಿರ್ಸಿ ಜಾತ್ರೆಗೆ ಹೊರಟಿದ್ದೆವು.....
ಹೆಚ್ಚು ಕಡಿಮೆ ಮೆಜೆಸ್ಟಿಕ್ ನಲ್ಲಿಯೇ ಜಾತ್ರೆಯ ರಷ್ ಶುರುವಾಗಿತ್ತು.ನನ್ನ ತಮ್ಮ ತಾನು ರೈಲ್ವೆಗೆ ಸೀಟ್ ಬುಕ್ ಮಾಡುತ್ತೇನೆ ಎಂದದ್ದರಿಂದ ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.ಆದರೆ ಇನ್ನೇನು ಹೊರಡಲು ಎರಡು ದಿನ ಇದೆ ಎನ್ನುವಾಗ ನೋಡೋಣ ಎಂದು ನಾನು,
"ಹಾ ಟಿಕೇಟ್ ಆತನೋ" ಎಂದು ಕೇಳಿದರೆ ಅವ....
"ಥೋ ಸಿಕ್ಕಿದ್ದಿಲ್ಯಾ ಮರಾಯಾ" ಎಂದಿದ್ದ.
ನನಗೋ, ಇವ ಇದನ್ನೇ ಮೊದಲು ಹೇಳಿದ್ದರೆ ನಾನಾದರೂ ಮಾಡುತ್ತಿದ್ದೆ ಎಂದು ಸಿಟ್ಟು ಬಂತು.ಅದೂ ಅಲ್ಲದೆ ಹಿಂದಿನ ಜಾತ್ರೆಯಲ್ಲಿ ಮಳೆಯ ಕಾರಣ ಪೂರ್ತಿ ಮಜ ಹಾಳಾದ ನೆನಪು ಬೇರೆ ತಿವಿಯುತ್ತಿತ್ತು.
ಇನ್ನೇನು ಮಾಡಲು ಸಾಧ್ಯ ಎಂದು ಶುಕ್ರವಾರ ರಾತ್ರಿ ಕ.ರಾ.ರ.ಸಂ. ದ ಯಾವುದಾದರೂ ಒಂದು ಬಸ್ ಹಿಡಿದು ಹೋದರಾಯಿತು ಎಂದು ಮೆಜೆಸ್ಟಿಕ್ ಗೆ ಹೋದೆವು.
ಅಂತೂ ಇಂತೂ ಹತ್ತು, ಹನ್ನೆರಡು ಬಸ್ ವಿಚಾರಿಸಿದ ಮೇಲೆ "ಲಿಂಗನಮಕ್ಕಿಗೆ" ಹೋಗುವ "ರಾಜಹಿಂಸೆ" ಬಸ್ ನಲ್ಲಿ ಹಿಂದಿನ ಮೂರು ಸೀಟ್ ಖಾಲಿ ಇರುವದು ತಿಳಿದು, ಸಾಗರದ ವರೆಗಿನ ಟಿಕೇಟ್ ಪಡೆದು ಜಾಗ ಹಿಡಿದೆವು.ಅಬ್ಬ ಇಂಥ ಸಮಯದಲ್ಲಿ ಊರಿಗೆ ಹೋಗುವದೂ ಸಾಕು ಈ ಕಷ್ಟವೂ ಸಾಕು ಅನ್ನಿಸಿಬಿಟ್ಟಿತು.
ಅಲ್ಲಿಂದಿಲ್ಲಿಗೂ ಬಸ್ಸಿನ ಟಾಪನ್ನು ತಲೆಯಿಂದ ಮುಟ್ಟುತ್ತಾ ಬಂದಿದ್ದೇ ಆಯಿತು.
ಮನೆಯಲ್ಲಿ ಮನೆಯವರ ಬಾಯಿಂದ ಜಾತ್ರೆಯ ಬಗ್ಗೆ ಅದೂ ಇದೂ ತಿಳಿಯುತ್ತ ಸಂಜೆ ಸುಮಾರು ಹತ್ತು-ಹನ್ನೆರಡು ಜನ ಜೊತೆಗೂಡಿ ಪೇಟೆಗೆ ಹೊರಟೇ ಬಿಟ್ಟೆವು.
"ಈ ಸಲ ಜಾತ್ರೆಯಲ್ಲಿ ತುಂಬಾ ರಶ್ಶು"
ಎನ್ನುವದು ಕೇಳಿದ್ದೆವು.ಆದರೆ ಅದೆಷ್ಟು ಅನ್ನುವದು ಅಲ್ಲಿ ಹೋದಾಗಲೇ ತಿಳಿದದ್ದು."ದೇವೀಕೆರೆ" ಕ್ರಾಸ್ ನಿಂದ "ಮಾರಿ ಚಪ್ಪರ"ದವರೆಗೆ ಸುಮಾರು ಒಂದು ಕಿಲೋಮೀಟರ್ ನಡೆಯಲು ಬರೋಬ್ಬರಿ ಮುಕ್ಕಾಲು ಗಂಟೆ ಬೇಕಾಯಿತು.ಅದು ಬೇರೆ ಮಕ್ಕಳು ಮನೆಯ ಹೆಂಗಸರು ಎಲ್ಲರನ್ನು ಸಂಭಾಳಿಸಿಕ್ಕೊಳ್ಳುತ್ತ. ಅಂತೂ ಇಂತು ಮಾರಿಕಾಂಬೆಗೆ ದೂರದಿಂದಲೇ ಕೈಮುಗಿದು...ಮಾಣಿಗೆ,ಕೂಸಿಗೆ ಅದು ಇದು ಖರೀದಿ ಮಾಡಿ, ಒಂದು ರುಮಾಲ್ ರೋಟಿ ತಿನ್ನುವಷ್ಟರಲ್ಲಿ 12ಗಂಟೆ ಆಗಿತ್ತು.ಮನೆಯವರೆಲ್ಲರ ಉಮೇದು ಮುಗಿಯುತ್ತ ಬಂದಿತ್ತು.
ಗಂಡಸರು "ಈ ಹೆಂಗ್ಸ್ರಾ ಕಟ್ಗ ಬಂದ್ರೆ ಇದೇ ಕಥೆ.ಬೇಗ್ ಬೇಗ್ ಬತ್ವೂ ಇಲ್ಲೆ,ಖರೀದಿ ಮಾಡುಲ್ ನಿಂತ್ರೆ ತಾಸ್ ಗಟ್ಲೆ ಮಾಡ್ತೊ" ಎಂಬ ಪುಕಾರು ಬೇರೆ.
ಅಂತೂ ಆ ದಿನದ ಜಾತ್ರೆ ಹಾಗೆ ಮುಗಿದಿತ್ತು.ಗಂಡಸರು,ಹುಡುಗರು ಆಗಲೇ ನಿಶ್ಚಯಿಸಿ ಬಿಟ್ಟಿದ್ದರು ನಾಳೆ ಯಾವ ಹೆಂಗಸರನ್ನೂ ಕರೆತರುವದು ಬೇಡಾ ಎಂದು.
ಮರುದಿನ ನಮ್ಮ ಐದಾರು ಜನರ ಟೋಳಿ ಹೊರಟಿತ್ತು ಸ್ವಲ್ಪ ಬೇಗ.ಅರ್ಧ ತಾಸಿಗೆಲ್ಲ ಮಾರಿದೇವಿಯ ಮುಂದೆ.ಅಲ್ಲಿಂದ ಮೊದಲೇ ನಿಶ್ಚಯಿಸಿದವರಂತೆ ದೋಣಿ ಹತ್ತಲು ಹೋದೆವು.
"ಹಾ ಎಲ್ಲಾ ಹಿಂದೆ ನಿತ್ಕಂಬನ ಮಜಾ ಬತ್ತು"
ಎಂದ ನನ್ನ ತಮ್ಮಂದಿರ ಅನುಭವದ ಮಾತುಗಳ ಮುಂದೆ ಎರಡಾಡದೆ ಹತ್ತಿ ನಿಂತೆವು.ಅಲ್ಲಿ ಕೂಗಿದ ಹೊಡೆತಕ್ಕೆ ಕೆಳಗಿಳಿಯುವ ಮೊದಲೇ ನಮ್ಮೆಲ್ಲರ ಧ್ವನಿ ಅರ್ಧ ಸತ್ತಿತ್ತು.
"ಸರಿ ಮುಂದೆ ಎಂತದಾ" ಎಂದ ಒಬ್ಬನ ಪ್ರಶ್ನೆಗೆ
" ತೊಟ್ಲು" (ಜಾಯಿಂಟ್ ವ್ಹೀಲ್) ಎನ್ನುವ ಉತ್ತರ ರೆಡಿಯಾಗಿತ್ತು.....
ಒಬ್ಬರ ಬೆನ್ನು ಒಬ್ಬರು ಕೈಯ್ಯಿಂದ ಹಿಡಿದು ಮತ್ತೆ ಅದೇ ಸಣ್ಣ ಮಕ್ಕಳ "ರೈಲಿನಂತೆ" ಮಾಡಿಕೊಂಡು ಅತ್ತ ಕಡೆ ಹೊರಟೆವು.
ಅಲ್ಲೋ ನಾವು ಕಾಲು ಬಿಟ್ಟು ನಿಂತರೂ ನಮ್ಮನ್ನು ಅಲ್ಲಿಗೆ ತಲುಪಿಸುವಷ್ಟು ಜನಜಂಗುಳಿ ತುಂಬಿತ್ತು.ಹಾಗೂ ಹೀಗೂ ನಾನು ಟಿಕೇಟ್ ಕೌಂಟರಿನ ಪಕ್ಕ ಹೋಗಿ ನಿಂತೆ.
ಒಂದು ಟಿಕೇಟ್ ಗೆ 30ರೂ ನಂತೆ ಲೆಖ್ಖ ಮಾಡಿ ಐದು ಜನರಿಗೆ ಎಂದು 100ರ ಎರಡು ನೋಟು ಹಿಡಿದು...
"5ಟಿಕೇಟ್ ಕೊಡಿ" ಎಂದು ಕೂಗಿದೆ
ಅವನೋ ಹಿಂದಿಯವನು.... "ಆ...ಕಿತ್ನಾ?" ಅಂದ.
ಆ ಮೈಕ್ ಗಳ ಅಬ್ಬರಾಟದಲ್ಲಿ ಹಾಗೂ ಸ್ವಲ್ಪ ಹೊತ್ತಿನ ಮೊದಲು ಕೂಗಿ ಕಳೆದುಕೊಂಡ ನನ್ನ ಧ್ವನಿ ಇವನಿಗೆ ಕೇಳಿಸಲಿಲ್ಲವೆಂದು ಈ ಸಲ ಸ್ವಲ್ಪ ಜೋರಾಗಿಯೇ.....ನನ್ನ ಎಡಗೈಯ್ಯನ್ನು ಅಗಲಿಸಿ
"ಪಾಂಚ್.....ಪಾಂಚ್." ಎಂದೆ.
ಈ ಸಲ ಅವನಿಗೆ ತಿಳಿಯಿತಿರಬಹುದು,
"ಬೀಸ್ ರುಪಯೆ ಛುಟ್ಟಾ ದೇನಾ" ಎಂದ.
ನಾನು, ಹಾಗಾದರೆ ಒಂದು ಟಿಕೇಟ್ ಗೆ ಎಷ್ಟು ಹಣ ಎಂದು ಅನುಮಾನಿಸುತ್ತಲೇ 20ರೂ ಗಳನ್ನು ತೆಗೆದು ಕೊಟ್ಟೆ.
ಅವನು ಪಟಕ್ಕನೆ ಇಸುದುಕೊಂಡು ಟಿಕೇಟ್ಟು ಹಾಗೂ ಚಿಲ್ಲರೆ ಕೊಟ್ಟ.
ತೆಗೆದುಕೊಂಡು ನೋಡಿದರೆ 4ಟಿಕೇಟ್ ನ ಜೊತೆಗೆ 100ರೂನ ನೋಟನ್ನು ಹಿಂತಿರುಗಿಸಿದ್ದ.
ಅರೇ ಇವ್ನಾ "ಐದು" ಕೊಡು ಅಂದರೆ "ನಾಲ್ಕೇ" ಕೊಟ್ಟನಲ್ಲ ಎಂದು ಸಿಟ್ಟು ಬಂತು.
ಇನ್ನೇನು ಕೂಗಿ ಬೈಯ್ಯಬೇಕು ಎಂದು ಬಾಯಿ ತೆರೆಯುವಷ್ಟರಲ್ಲಿ ನನಗೇ ನಗು ಬರಲು ಶುರುವಾಯಿತು.ನಾನು ಹಿಂತಿರುಗಿ...
"ತಮ್ಮಾ...ಅವಾ ಪಶಿ ಬಿದ್ನೋ" ಅಂದೆ.
ನನ್ನ ತಮ್ಮ ಇದ್ದವನು "ಎಂತಕ್ಕೋ" ಅಂದ.
"ಹಾ.... ನಾನು ಎಡಗೈಯ್ಯಿ ತೋರ್ಸಿ ಐದ್ ಟಿಕೇಟ್ ಕೊಡು ಅಂದ್ನಲ, ಅವಾ ನಾಕ್ ಟಿಕೇಟ್ ಕೊಟ್ನೋ"
ಅಂದಿದ್ದೇ ತಡ ನನ್ನ ತಮ್ಮನೂ ದೊಡ್ಡದಾಗಿ ನಗಲು ಶುರು ಮಾಡಿದ.
ಕಾರಣವಿಷ್ಟೆ.....
ನನ್ನ ಎಡಗೈಯ್ಯಿನ ಕಿರು ಬೆರಳಿಗೆ ಎರಡು ವರ್ಷಗಳ ಹಿಂದೆ ಆಪರೇಷನ್ ಆಗಿ ಅದು ಈಗ ಮಡಚಿದ ಹಾಗೆ ಕಾಣುತ್ತದೆ.
ಆ ಟಿಕೇಟ್ ಕೊಡುವವನದೂ ತಪ್ಪಿಲ್ಲ ನಾನು ಎಡಗೈ ತೋರಿಸಿ....
"ಐದು" ಕೊಡು ಅಂದಾಗ ಕಂಡಿದ್ದು "ನಾಲ್ಕೇ" ಬೆರಳುಗಳು......
ಆ ನಂತರ ಪುನಃ ಬಲಗೈಯ್ಯನ್ನು ತೋರಿಸಿ
"ಪಾಂಚ್.....ಪಾಂಚ್..... ಬೋಲಾಥಾ"
ಎಂದು ಹೇಳಿ ಇನ್ನೊಂದು ಟಿಕೇಟ್ ಪಡೆದುಕೊಂಡು ತೊಟ್ಲು ಹತ್ತುವವರೆಗೂ ಹೇಳಿಕೊಂಡು ನಗುತ್ತಲೇ ಇದ್ದೆವು
ಹತ್ತಿದ ಮೇಲೆ ಮತ್ತೆ ಅದೇ
"ಹೋ....." ಎಂದು ಗಂಟಲು ಹರಿದು ಹೋಗುವಂತೆ ಕೂಗಿದ್ದು..........
Posted by
ಮೌನಿ
Thursday, December 24, 2009
at
1:13 AM

ಮನದಲ್ಲೆಲ್ಲೋ ನೆನಪುಗಳ ಉಂಗುರ
ಮೂಡಣದ ಸೂರ್ಯ ಮಸಣದೆಡೆಗೆ
ಹೂತು ಕಣ್ಣನು ನಿನ್ನ ಬರುವಿಕೆಗೆ
ಬರಿದೆ ಬರಡಾಯಿತು ಬದುಕು
ಇನಿತಿನಿತು ಆಶಿಸಿದೆ ನಿನ್ನ
ಇನಿತಾದರು ಇದೆಯೇ ನೆನಪು ನನ್ನ
ಅತಿಯಾದುದಲ್ಲ ಎನ್ನ ಬಯಕೆ
ಜೊತೆಯಾಗಲು ಒಲ್ಲೆ ನೀ ವನಿತೆ
ಜೀವ ಹಿಂಡುತಿದೆ ನೆನಪು
ವದ್ದೆಯಾಗಿದೆ ಹೃದಯ
ಮೆಟ್ಟಿಯಾದರೂ ಹೋಗು ಒಮ್ಮೆ
ಇರಲಿ ಅದರ ಗುರುತು ಎನಗೆ
Posted by
ಮೌನಿ
Friday, November 20, 2009
at
2:58 AM

ಜನಿಸಿದ ಗಳಿಗೆ ನಾನತ್ತೆ,
ಕಣ್ಣಂಚಿನಲಿ ಹನಿ ನೀರ ಇಟ್ಟು.....
ನೀನಕ್ಕೆ!!!!!
ಹಸಿದು ಜೀವ ಬಯಸೆ ಜೇನ,
ಎದೆಯಾಮೃತವ ಬಸಿದು ಕೊಟ್ಟು.....
ನೀನಕ್ಕೆ!!!!!
ಎದ್ದು ಮುಂಜಾವಿನಲಿ ಮೊದ್ದು ಮಾತಾಡಲು,
ಮನದಿ ಹಾಡ ಗುನುಗುವುದ ಬಿಟ್ಟು.....
ನೀನಕ್ಕೆ!!!!!
ಪಟ್ಟು ಬಿಡದೆ ನಡೆದು ಬಿದ್ದೆ,
ಕಣ್ಣ ತೇವದಿ, ಮಾಡಿ ಮುದ್ದ.....
ನೀನಕ್ಕೆ!!!!!
ಬಳಿಕ ಗೆದ್ದೆನೆಂಬ ನನ್ನ ಹಮ್ಮ,
ತನ್ನ ಗೆಲಿವುಯೆಂದು ಹೆಮ್ಮೆಯಿಂದ.....
ನೀನಕ್ಕೆ!!!!!
ಈಗ......
ಸೋತ ಜೀವ ಬೇಡೆ ಸನಿಹ,
ಸರಿದೆ ದೂರ ಬಿಟ್ಟು ಕರುಳ ನಾನೆತ್ತ.....?
ನೀನತ್ತೆ!!!!!
ಕೆಲವೊಮ್ಮೆ ಬೇಡದ ಮುದಿ ಜೀವಗಳನ್ನು ನೋಡಿದಾಗ ಹೀಗನಿಸಿದ್ದು....
ನಾವು ಹೀಗೇಕೆ........?
ಬಸಿದ ಜೀವಗಳಿಗೆ ನಮ್ಮ ಚೈತನ್ಯ ತುಂಬಲು ಹಿಂದೆ-ಮುಂದೆ ನೋಡುವುದೇಕೆ?
Posted by
ಮೌನಿ
Friday, October 23, 2009
at
12:45 AM

ಹುಟ್ಟೂರ ಬಿಟ್ಟೆ,
ಹುಟ್ಟು ಗುಣವ ಬಿಟ್ಟೆ,
ತಿಳಿದ ಬಯಕೆ ಬಿಟ್ಟೆ,
ತೀರದ ಆಸೆ ಬಿಟ್ಟೆ,
ಕನಸ ಕಾಣುವುದ ಬಿಟ್ಟೆ,
ಕನಸಲಿ ಬರುವುದ ಬಿಟ್ಟೆ,
ನಗುವುದ ಬಿಟ್ಟೆ,
ನಗಿಸುವುದ ಬಿಟ್ಟೆ,
ನಿನ್ನೊಲಿಸಲು ಇನ್ನೇನ ಬಿಡಲಿ?
ಇರುವುದೊಂದು ಜೀವ.....
ಬಿಡೆನು ನಿನ್ನ ನೆನಪ...............
Posted by
ಮೌನಿ
Monday, September 28, 2009
at
3:59 PM
ಬರೆಯದೇ ಜಿಡ್ಡು ಹಿಡಿದಿದೆ....ಆದರೂ ಬರೆಯಲು ಏನೂ ಹೊಳೆಯುತ್ತಿಲ್ಲ....ಇನ್ನು ತಾಳಲಾರೆ ಎಂದು, ನನ್ನ ಚಿಕ್ಕಮ್ಮನ ಮಗನಿಗಾದ ಒಂದು ತಮಾಷೆಯ ಅನುಭವವನ್ನು ಇಲ್ಲಿ ಬರೆಯುವ ಪ್ರಯತ್ನ.ಅವನ ಮಾತುಗಳಲ್ಲಿ ಓದಿಕೊಳ್ಳಿ.
ನಾನು ಸುಮಾರು 5-6 ನೇ ಕ್ಲಾಸಿನಲ್ಲಿ ಓದುತ್ತಿರುವ ಕಾಲ ಇರಬೇಕು.ರಜೆಯಲ್ಲಿ ದೊಡ್ಡಾಯಿಯ ಮನೆಗೆ ಹೋಗಿದ್ದೆ.
ಅವರದು ಕರಾವಳಿ ತೀರದ ಊರು....ಬೇಸಿಗೆಯಲ್ಲಿ ತೀರದ ದಾಹ,ಬೆವರು.ಆದರೂ.....ನನಗೇಕೋ ಅಲ್ಲಿ ಕಾಲ ಕಳೆಯುವುದೆಂದರೆ ಬಲು ಇಷ್ಟ.
ದೊಡ್ದಾಯಿಯ ಕೈಯ್ಯಿನ ಅಡುಗೆ,ಮಕ್ಕಳ ಜೊತೆಗೆ ಆಟ,ಸಂಜೆ ಹೊತ್ತಿನ ಸಮುದ್ರದಂಚಿನ ತಿರುಗಾಟ,ಕದ್ದು ಮಾವಿನ ಹಣ್ಣನ್ನು ತಿನ್ನುವದು....ಮಧ್ಯ..ಮಧ್ಯ ದೊಡ್ಡಪ್ಪನ ಕೀಟಲೆ,ಬೈಗುಳ ಒಂದೇ ಎರಡೇ....ಕಾಲ ಕಳೆದಿದ್ದೇ ತಿಳಿಯುತ್ತಿರಲಿಲ್ಲ.
ಅದೂ ಅಲ್ಲದೆ ದೊಡ್ದಾಯಿಯ ಧ್ವನಿ ನನ್ನ ಆಯಿ ಮಾತನಾಡುವಂತೆ ಕೇಳುತಿದ್ದುದರಿಂದಲೋ ಏನೋ...ನನಗೆ ನನ್ನ ಆಯಿಯ ಹತ್ತಿರ ಇರುವ ಅನುಭವ....(ಚಿಕ್ಕ ಮಕ್ಕಳಿಗೆ ಕೆಲವೊಬ್ಬರು,ಕೆಲವಷ್ಟು ಇಷ್ಟವಾಗುವದಕ್ಕೆ ತಕ್ಕ ಕಾರಣಗಳಿರುತ್ತವೆ ಎನ್ನುವದು ಸತ್ಯ)
ನನ್ನ ದೊಡ್ದಪ್ಪನದು ಪೌರೋಹಿತ್ಯ ವೃತ್ತಿ.ಅದು ಅವರ ಅಜ್ಜ ಶಂಕರ ಭಟ್ಟರ ಕಾಲದಿಂದಲೂ ನಡೆದುಕೊಂಡು ಬಂದ ಜೀವನಾಧಾರ.ಮದುವೆ,ಮುಂಜಿ,ಶಾಂತಿ,ಮೀನು ಹಿಡಿಯಲು ಹೋಗುವ ಮೊದಲು ದೋಣಿ ಪೂಜೆ ಮಾಡುವದು....ಹೀಗೆ ಹಲವಾರು ವಿಧ.ಇವೆಲ್ಲದರ ಜೊತೆಗೆ ಮನೆಯಲ್ಲಿ ಇದ್ದಷ್ಟು ಹೊತ್ತು ಬಂದ ಜನರಿಗೆ ಭವಿಷ್ಯ ಹೇಳುವದು,ಅವರ ತೊಂದರೆಗಳಿಗೆ ಮಂತ್ರಿಸಿ ಕೊಡುವದು ಜಪ ಮಾಡಿ ಕೊಡುವದು ಬೇರೆ.
ಅದನ್ನು ಅಲ್ಲೇ ಪಕ್ಕದಲ್ಲಿ ನಿಂತು ನೋಡುವದು ಒಂದು ರೀತಿಯ ಮಜ.ಅಜ್ಜ,ದೊಡ್ಡಪ್ಪ ಆ ಚಿಕ್ಕ ಮರದ ಮಣೆಯ ಮೇಲೆ ಅದೇನೋ ಬಳ್ಳಿ,ಎಲೆ,ಲಿಂಬೆ ಹಣ್ಣನ್ನು ಇಟ್ಟು ಕೊಟಕ್.......ಕೊಟಕ್..... ಎಂದು ಕತ್ತರಿಸುತ್ತಿದ್ದರೆ ಸ್ವಲ್ಪ ಹೆದರಿಕೆಯೂ ಕೂಡಾ.ಆದರೆ ಬರುವ ಜನರು ಭಟ್ಟರ ಮಕ್ಕಳಿಗೆ ಎಂದು ತರುವ ಚಾಕಲೇಟಿನ ಆಸೆಯಾಗಿ ಅಲ್ಲೇ ನಿಲ್ಲುತ್ತಿದ್ದೆವು.ಕೈಗೆ ಸಿಕ್ಕ ತಕ್ಷಣ ಒಂದೇ ಓಟ...
ಆ ಸಲ ಅವರ ಮನೆಯ ನೆಂಟರ ಮಕ್ಕಳೂ ಬಂದಿದ್ದರು.ರಾತ್ರಿ ನಮ್ಮ ಮಕ್ಕಳ ಪಂಗಡ ಹೊಳ್ಳಿಯ(ಹೊರಗಡೆಯ ವರಾಂಡ) ಮೇಲೆ ಮಾತನಾಡುತ್ತಾ,ಮೆಲ್ಲಗೆ ಕಿಸಿ-ಕಿಸಿ ನಗುತ್ತ ಮಲಗುವದು ವಾಡಿಕೆ.ಚಿಕ್ಕವನಾದುದರಿಂದ ಯಾವತ್ತೂ ದೊಡ್ದಾಯಿಯ ಜೊತೆಗೆ ಮಲಗುವ ನಾನು, ಉಮೇದಿನಲ್ಲಿ ಹೊರಗೆ ಮಲಗುವ ಯೋಚನೆ ಮಾಡಿದೆ.
ಆದರೆ ಎಲ್ಲರಿಗಿಂತ ಚಿಕ್ಕವನಾದ ನನ್ನನ್ನು,ಅದೇಕೊ ಅವರೆಲ್ಲರೂ ಸ್ವಲ್ಪ ದೂರ ಅಂದರೆ ಬಾಗಿಲ ಇನ್ನೊದು ಪಕ್ಕ ಮಲಗಲು ಬಿಟ್ಟರು.ಆ ಕಡೆ 2-3 ಜನ ಈ ಕಡೆಗೆ ನಾನು ಒಬ್ಬನೇ.
ಅದು ನನ್ನ ದೊಡ್ಡಪ್ಪನ ಕಾರ್ಯ ಬಾಹುಳ್ಯದ ಜಾಗವೂ ಹೌದು. ನನ್ನ ಪಕ್ಕದಲ್ಲೇ ಅವರ ನೋಟ ನೋಡುವ ಮಣೆ,ಕವಡೆ,ಪಂಚಾಂಗ ಇತರ ಪರಿಕರಗಳು ಇದ್ದವು.
ಹೊರಗೆ ಬಂದು ಆಗಿತ್ತು ಈಗ ನಾನೊಬ್ಬನೇ ಅಲ್ಲಿ ಮಲಗುವುದಿಲ್ಲವೆನ್ನಲು ಅದೇನೋ ಹಿಂಜರಿಕೆ,ನಾಚಿಕೆ,ಹೆದರುಪುಕ್ಕ ಎಂದು ನಕ್ಕರೆ?.ಅದಕ್ಕಿಂತ ಇದೇ ಲೇಸು ಎಂದು ರಾಮ ಜಪ ಮಾಡುತ್ತಾ ಕಣ್ಣು ಮುಚ್ಚಿದೆ.ಯಾವಾಗಲೋ ನಿದ್ದೆ ಬಂದಿರಬೇಕು ಅದೂ ಅರೆಬರೆ.ಸ್ವಲ್ಪ ಹೊತ್ತಿನಲ್ಲಿ ಏನೋ ಶಬ್ಧ.
"ಕಟಕ್...ಕೊಟಕ್....ಕಟಕ್".
ನಿದ್ದೆಗಣ್ಣು...ಮೊದಲಿನ ಹೆದರಿಕೆ ಬೇರೆ,ಥಟ್ಟನೆ ಎಲ್ಲಿದ್ದೇನೆಂದು ತಿಳಿಯದ ಪರಿಸ್ಥಿತಿ.ಮತ್ತೆ ಅದೇ ಶಬ್ಧ.....
"ಕಟಕ್...ಕೊಟಕ್....ಕಟಕ್........ಕಟಕ್...ಕೊಟಕ್....ಕಟಕ್".
ಎಲ್ಲಿ ನೋಡಿದರೂ ಕತ್ತಲೆ,ಜೊತೆಗೆ ನಾನೊಬ್ಬನೇ ಮಲಗಿದ್ದು....ನೆನಪಾಗಿದ್ದು ಪಕ್ಕದಲ್ಲಿದ್ದ ದೊಡ್ಡಪ್ಪನ ನೋಡಿಸುವ ಮಣೆ.....ಮೈ ಪತರಗುಟ್ಟ ತೊಡಗಿತು.
ಇನ್ನು ಇಲ್ಲೇ ಇದ್ದರೆ ನನಗೆ ಏನಾದರೊಂದು ಆಗುವದೆಂದು ಕತ್ತಲಲ್ಲೇ ತೆವಳುತ್ತ ಬಾಗಿಲಿನಿಂದ ಒಳಗೆ ಹೋದೆ.ಹೆದರಿಕೆ ನನ್ನಿಂದ ಅಷ್ಟು ಮಾಡಿಸಿತ್ತು.ಒಳಗೆ ಹೋದಾಗ ಕೈಗೆ ಏನೋ ತಗುಲಿತು.....ಮಲಗಿದ ದೊಡ್ದಾಯಿಯ ಕಾಲು.
ಎಚ್ಚರವಾಗಿ ಅವಳು....."ಅದ್ಯಾರು ಅಂದಳು?".
"ನಾನೆಯೇ ದೊಡ್ದಾಯಿ....ಅಂದೆ".
"ಏನಾತೋ...? ಬಾ ನನ್ ಸಂತಿಗೆ ಮನಿಕ....." ಅಂದಳು.
ಅವಳನ್ನು ತಬ್ಬಿ ಮಲಗಿದ ನನ್ನಷ್ಟು ಸುಖಿ ಆ ರಾತ್ರಿ ಯಾರೂ ಇರಲಿಕ್ಕಿಲ್ಲ.
.........ಥೋ ಇದೇನು ಮತ್ತೆ ಶಬ್ಧ .......ಇಲ್ಲ ಯಾರೋ ಏನೋ ಹೇಳುತ್ತಿದ್ದಾರೆ ......ಸರಿಯಾಗಿ ಕಣ್ಣು ವಡೆದು ಎಚ್ಚರವಾಗಿ ನೋಡಿದರೆ ಅಕ್ಕ ಎಲ್ಲರಿಗೂ ಬೈಯ್ಯುತಿದ್ದಳು.
"ಹಂಗಾರೆ ಯಾರಿಗೂ ಹೇಳುಲ್ ಆಜಿಲ್ಯಾ?...ಹನಿ ಎಚ್ರಾನೂ ಆಜಿಲ್ಯಾ?ಒಂದ್ ಹನಿನೂ ಇಲ್ಲೇ.....ಎಲ್ಲಾ ಚೊಕ್ಕ ಮಾಡಿಕ್ ಹೋಜು.....ದರಿದ್ರ ದನಾ...."
ಇವಳು ಏನು ಹೇಳುತ್ತಿದ್ದಾಳೆ ಎಂದು ತಿಳಿಯದೆ ನಾನು....
"ಎಂತಾ ಆತೆ ಅಂಜನಕ್ಕಾ?" ಅಂದೆ.
"ಅಲ್ ನೋಡು....ರಾತ್ರೆ ಕಳ್ ದನ ಬಂದ್ಕಂಡು ಪೂರ ಹೂಗಿನ ಗೆಡಾ ಚೊಕ್ಕಮಾಡಿಕ್ ಹೋಜು....ಹೆರ್ಗ್ ಮನಿಕಂಡವು ಒಂಚೂರು ಹೇಳಿದ್ವಿಲ್ಲೆ ....ಇಲ್ಲಗಿದ್ರೆ ಬಡುಲ್ ಆಗ್ತಿತ್ತು....ನಾ ನೆಟ್ಟದ್ದು ಎಲ್ಲಾ ಹಾಳಾಗ್ ಹೋತು.ಸಾಯಲಿ ನಾ ಇನ್ ನೆಡುಲ್ ಹೋಗ್ತ್ನಿಲ್ಲೆ .ಬರೀ ಆ ದನದ್ ಬಾಯಿಗ್ ಕೊಡುಲೇ ಹದಾ ಆಗ್ತು."
ನನ್ನ ಬಿಟ್ಟ ಬಾಯಿ ಬಿಟ್ಟ ಹಾಗೆ ಇತ್ತು......
"ಹಂಗಾರೆ ರಾತ್ರೆ ಕೊಟಕ್...ಕೊಟಕ್.... ಗುಟ್ಟದ್ದು ಅದರಾ ಅವಾಜೇಯಾ......"ಬಾಯಿ ತಪ್ಪಿ ಬಂದಿತ್ತು.
"ಸತ್ತವ್ನೆ ನಿಂಗ್ ಕೇಳಿತ್ತ? ಹೇಳುಲ್ ಆಜಿಲ್ಯಾ ಹಂಗಾರೆ?....ಈಗ ಹೇಳ್ತೆ.....ಪಾಪ್ಗೆಟ್ ದನಾ ಪೂರಾ ತಿಂದ್ಕ ಹೋಗ್ ಸತ್ತತಲಾ......"ಅವಳ ಪುರಾಣ ಮುಂದುವರೆದಿತ್ತು....
ನನ್ನ ಮುಖದಲ್ಲಿ ನಗು ಮೂಡಿತ್ತು.....ರಾತ್ರಿ ಆ.... ಕಟಕ್...ಕೊಟಕ್...ಕಟಕ್....ಶಬ್ಧ... .ದೊಡ್ಡಪ್ಪನ ಮಣೆಯದಲ್ಲ...ಅಂಜನಕ್ಕನ ಹೂವಿನ ಗಿಡಗಳನ್ನು ಆ ಹಾಳು ದನ ಕಡಿದು, ನುಂಗಿ, ನೀರು ಕುಡಿದ ಶಬ್ಧ ಎಂದು.....
ಆದರೆ ನನಗಾದ ಹೆದರಿಕೆ ಬಗ್ಗೆ ಹೇಳಿದರೆ ಎಲ್ಲಿ ನನ್ನ ಮರ್ಯಾದೆ ಹೋಗುವುದೋ ಎಂದು ಹೇಳಲು ಹೋಗಲಿಲ್ಲ....
ಎದ್ದು ಮುಖ ತೊಳೆದು ದೊಡ್ದಾಯಿ ಎರೆದ ದೋಸೆ ತಿನ್ನಲು ಹೋದೆ.
ಆದರೆ ಈಗಲೂ ನೆನಪಾದರೆ ಒಬ್ಬನೇ ಎಲ್ಲೋ ನೋಡುತ್ತಾ ನಗುತ್ತೇನೆ.........
ಬಾಲ್ಯದ ದಿನಗಳು...ಎಷ್ಟು ಸುಂದರ.
Posted by
ಮೌನಿ
Saturday, May 9, 2009
at
12:35 AM
ಮದುವೆಯಾದ ಹೊಸದರಲ್ಲಿ,
ಏನು ಚೆಂದ,ಕಣ್ಣಿಗೆ ತಂಪು.
ಈಗೀಗ ಏಕೋ ಏನೋ,
ರುಚಿಯೂ ಇಲ್ಲ, ಬರೀ ಹಳಸಲು ಕಂಪು.-ಮರ್ಮಜ್ನ.
Posted by
ಮೌನಿ
Friday, May 8, 2009
at
7:53 PM

ಅದೇನು ಕನಸು,
ಸಾಧ್ಯವಾಗದಂಥಾದ್ದು ಚೆಲುವೆ?
ಚಂದ್ರಮನ ಅಂಶ ನೀನು,
ಬಿಡು ಬಿಡು ಬೆರಗು ಸೂರ್ಯ ನಾನು.
ಚುಮು ಚುಮು ಮುಂಜಾವಿನಲ್ಲಿ,
ಕದ್ದು ಚಿಲಿಪಿಲಿಗಳ ಕೊರಳ ಸವಿಯೋಣ ಬಾ.
ಹರಿವ ನೀರಲ್ಲಿ ಮೀನ ಸರಿಸಿ,
ಮೊಗದ ನೆರಳ ತೋರುವೆ ಬಾ.
ತೊರೆಯ ನಡುವ ಮುರಿದು ಕಾಲಲ್ಲಿ,
ಮನದಣಿಯೆ ಪಿಸುಗುಟ್ಟೋಣ ಬಾ.
ಕಡಲ ತಡಿಯಲ್ಲಿ ತಂಗಾಳಿ ಜೊತೆಯಲ್ಲಿ,
ಬಿಟ್ಟೂ ಬಿಡದೆ ಗೂಡ ಕಟ್ಟೋಣ ಬಾ.
ಈ ಜೀವನ ಸುಂದರ ನಮ್ಮಿಬ್ಬರಲ್ಲಿ,
ಜೀವ ಇಡುವೆ ಜೊತೆಯಾಗೋಣ ಬಾ.
Posted by
ಮೌನಿ
Monday, May 4, 2009
at
2:07 AM

ಇಂದೇತಕೋ ತೀರದ ದಾಹ,
ಸಖಿ ನಿನ್ನ ಸ್ನೇಹ ಬೇಡಿದೆ.
ಮನ ಚಕೋರ, ಸಾಕ್ಷಿ ಚಂದ್ರಮನೇ,
ಬಿಡು, ಸೂರ್ಯ ಬಲು ಯಾತನೆ.
ತನು ಕಾದು ಮನ ಉಯ್ಯಾಲೆ,
ನಿನ ತಿರುವುಗಳೆಷ್ಟು? ಹುಡುಕುವಾಸೆ.
ಮೂಗಿಗಡರಿದ ಮೈಗಂಧ,
ನವಯಾತನೆ ನರನಾಡಿಗಳಲಿ.
ಬೆಸೆವ ತುಟಿಗಳ ಜೊತೆಗೆ,
ಹೊಸೆದ ದಾರವಾಗುವಾಸೆ.
ಇದೋ!!! ನನ್ನ ಒಸಗೆ,
ಬಾ ಎದೆಯೇರು ಸುಮ್ಮಗೆ.
ಮತ್ತೆ ಮೈ ಮನಗಳ ಮರ್ಜನ,
ಹೂ ರಾಶಿಗಳ ಮಜ್ಜನ.
ಮಥಿಸಿ ಹೆದೆಯೇರಿಸೆ ಕಾಮನ,
ನಟ್ಟಿರಿರುಳಲಿ ಕಾಳಿಂಗ ನರ್ತನ.
Posted by
ಮೌನಿ
Friday, May 1, 2009
at
2:10 PM

ನೀರವ ರಾತ್ರಿ,ಬಯಕೆಗಳ ಕಾದಾಟ,
ಮೈಮೇಲೆ ಕೈಗಳ ಸರಿದಾಟ,
ಅಪರಿಚಿತರಂತೆ ಪರಿಚಿತ ದೇಹಗಳ ತಡಕಾಟ.
ಸಂದಿ ಗೊಂದಿಯೆನ್ನದ ಹುಡುಕಾಟ,
ಅದಮ್ಯ ಉತ್ಸುಕತೆಯ ಹೋರಾಟ,
ಒಬ್ಬರನ್ನೊಬ್ಬರು ಮೆಟ್ಟಿ ನಿಲ್ಲುವ ಚೆಲ್ಲಾಟ.
ಸದ್ದಿಲ್ಲದೆ ಗಮ್ಯದೆಡೆಗಿನ ಸಾಗಾಟ,
ದೇಹ ಕೆಂಡ,ಏದುಸಿರಿನ ಹಾರಾಟ,
ಸಂತ್ರಪ್ತಿಯ ಮುಗುಳ್ನಗೆ,ಕಣ್ಣಂಚಿನ ನೀರಾಟ.
Posted by
ಮೌನಿ
Wednesday, April 29, 2009
at
1:15 AM

ಸುಖ-ದುಃಖದ ಆಗರ.....ಭಾವನೆಗಳ ಕಲಸು ಮೇಲೋಗರ. ಜೋಪಾನ ಮಾಡಿದರೆ ಮಾತ್ರ ಉಳಿಯುವಂಥಾದ್ದು.ಎಳೆದರೆ ಕಿತ್ತು ಬಂದೀತು...ಜೋಕೆ.
ಅವಳು ಮುದ್ದು ನಾಲ್ಕು ವರ್ಷದ ಕಿಶೋರಿ,ತುಂಟಿ,ಮುಗ್ಧೆ ನನ್ನ ಕಣ್ಮಣಿ.ನನ್ನ ಅಕ್ಕನ ಮಗು. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ.
ನಾನು ಸಿಕ್ಕರೆ, ಬೆಳಗ್ಗೆ ಎದ್ದರೆ ಕೂರಲೂ ನನ್ನ ತೊಡೆಯೇ ಆಗಬೇಕು,ಹಲ್ಲುಜ್ಜಲೂ ನಾನೆ,ಸ್ನಾನವೂ ಮಾವನೇ ಮಾಡಿಸಬೇಕು. ರಾತ್ರಿ...."ಜಿಂಕೆಮರಿ ನಂಗೊಂದ್ ಕಥೆ ಹೇಳಾ.ಬೆಜಾರ್ ಬಂದೋಜು.ಆ ಮೊಲದ್ದು ಹೇಳು ನಂಗ್ ಬಗೇಲ್ ಮರ್ತೋದಾಂಗ್ ಆಜು."(ಜಿಂಕೆಮರಿ ನನಗಿಟ್ಟ ಇನ್ನೊಂದು ಹೆಸರು.ಕಥೆ ಹೇಳು ಅನ್ನುವ ಪರಿ) ಅಂದರೆ ಎಷ್ಟು ನಿದ್ದೆ ಬಂದಿದ್ದರೂ ಹೇಳದೆ ಮಲಗಿದರೆ ನನಗೆ ನಿದ್ದೆ ಬರದು.
ಮೊದಲೆಂದೂ ಹೀಗಾಗಿರಲಿಲ್ಲ.ಅವತ್ತೆಲ್ಲಾ ತಿರುಗಿ ಸುಸ್ತಾಗಿ ಮನೆಗೆ ಬಂದಿದ್ದೆವು.ಮದುವೆ ಮನೆಯಲ್ಲಿ ಅವಳದ್ದು ಓಡಾಟವೋ,ಓಡಾಟ.ತಿರುಗಿ ಕಾರಿನಲ್ಲಿ ಬರುವಾಗಲೂ ಕೀಟಲೆ ನಿಂತಿರಲಿಲ್ಲ.
ಮನೆಗೆ ಬಂದ ನಂತರ "ತಮ್ಮಾ ನಾನು ನೀನು ಆಟಾ ಆಡ್ವನ"(ಒಮ್ಮೊಮ್ಮೆ ಅವಳು ನನ್ನನ್ನು ಹೀಗೆ ಸಂಭೋಧಿಸತ್ತಾಳೆ). ನನಗೆ ಅವತ್ತೇ ಸಾಯಂಕಾಲ ಬೆಂಗಳೂರಿಗೆ ಹೊರಡುವ ತರಾತುರಿಯಿದ್ದರೂ ಇಲ್ಲವೆನ್ನಲು ಮನಸ್ಸಾಗಲಿಲ್ಲ.ಅಂತೂ ಸ್ವಲ್ಪ ಹೊತ್ತು ಅವಳ ಜೊತೆ ಆಟವಾಡಿ ಗಡಿಬಿಡಿಯಲ್ಲಿ ತಯಾರಾಗಿ ಹೊರಡುವ ಹೊತ್ತಿಗೆ ಬಸ್ಸು ಬರುವ ಸಮಯವಾಗಿತ್ತು.
ಹೊರಟವನಿಗೆ ಬಾಗಿಲಲ್ಲೇ ಇದ್ದ ಅವಳಿಗೆ ಯಾವತ್ತಿನಂತೆ ಹೋಗಿಬರುತ್ತೇನೆ ಅಂದಾಗ..... ಸಣ್ಣಗೆ ಹುಂ...ಅಂದವಳು ಸರ ಸರನೆ ಒಳಗೆ ಓಡಿದ್ದಳು. ಇವತ್ಯಾಕೆ ಹೀಗೆ ಎಂದು ಒಳಗೆ ಹೋದವನಿಗೆ ಕೇಳಿದ್ದು ಅವಳ ಅಳುವ ಧ್ವನಿ. "ತಂಗಿ ಎಂತಕ್ ತೀಡ್ತ್ಯೆ....ಮಳ್ಳಿ"(ತಂಗಿ ಯಾಕೆ ಅಳುತ್ತೀ) ಹೇಳುವಷ್ಟರಲ್ಲಿ ನನ್ನ ಕೊರಳು ಗಧ್ಗವಾಗಿತ್ತು.ಇನ್ನು ನಿಂತರೆ ನಾನೂ ಅಳುವದು ಖಂಡಿತ ಅಂತನಿಸಿದಾಗ ಗೇಟಿನ ಕಡೆ ನಡೆದಿದ್ದೆ.
ಅವಳ ಅಮ್ಮ ಸೊಂಟದ ಮೇಲೆ ಕೂರಿಸಿಕೊಂಡು ಗೇಟಿನವರೆಗೂ ಬಂದು "ಇವಳಿಗೆ ಮುಂದಿನ ಭಾನುವಾರ ಮತ್ತೆ ಬರುತ್ತೇನೆಂದಾದರೂ ಹೇಳಿ ಹೋಗು.ಇಲ್ಲದಿದ್ದರೆ ಕಷ್ಟ" ಅಂದಾಗ ಮತ್ತೊಮ್ಮೆ ಬಾಯಿ ಬಿಡಬೇಕಾಯಿತು. ಏನೋ ಹೇಳಿ ಸಮಾಧಾನ ಮಾಡಿ ಹೊರಟಾಗ,ಅವಳ ದುಃಖ ಒಂದು ಸ್ಥಿಮಿತಕ್ಕೆ ಬಂದಿತ್ತು.
ಟಾಟಾ ಎಂದು ಕೈ ಆಡಿಸುತ್ತಿದ್ದವಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.......
ಹಿಂತಿರುಗಿ ನೋಡಿದ ನನಗೆ ಅಮ್ಮ-ಮಗಳು...ಮಂಜು ಮಂಜಾಗಿ ಕಾಣಿಸುತ್ತಿದ್ದರು.
ಇದೇನಾ ರಕ್ತ ಸಂಭಂಧ ಎಂದರೆ?
"ಯಾರನ್ನಾದರೂ ತುಂಬಾ ಪ್ರೀತಿಸುವದೂ ಕೊನೆಗೆ ನಮಗೇ ತೊಂದರೆ,ಮನಸ್ಸಿಗೆ ದುಃಖ್ಖ ಕೊಡುತ್ತದೆ " ಎಂಬ ನನ್ನ ಗೆಳೆಯನ ಮಾತು ನೆನಪಾಗಿತ್ತು.
Posted by
ಮೌನಿ
Saturday, April 25, 2009
at
1:57 AM

ನೀನು ಸುಂದರ,ಗುಣಿ,ಮುಗ್ಧ,
ಎಂದ,ಜನರ ನುಡಿ ಮನಕೆ ಮುದ.
ಎದೆ ಉಬ್ಬಿ,ಗರ್ವ ಮೊಗ ತುಂಬ,
ಇದೆಲ್ಲ ನನ್ನ ಗಳಿಕೆ,ಕೃಷಿ.
ಆದರೂ ಮನದಲ್ಲೆಲ್ಲೋ ಕದಲಿಕೆ,
ಅಯೋಮಯ,ಕಳವಳ,ಒಪ್ಪದ ಮನ.
ಆಚೆ ನಿಂತು ನೋಡಿದಾಗ ಕಾಣುವುದು,
ನಾನಲ್ಲಾ,ನನ್ನೊಳಗಿನ ನೀನು.
Posted by
ಮೌನಿ
Tuesday, April 21, 2009
at
1:25 AM

ಮಾತು ಮಾಣಿಕ್ಯ ,ಮೌನ ಬಂಗಾರ,
ನೋಡಿ ನಿನ್ನ ಸುಮ್ಮನಿರುವೆನೇ,
ನನ್ನ ಬಂಗಾರಾ.
ಬಳೆಯ ಕಿಣಿ ಕಿಣಿ,ಕಾಲ ಗಿಲಿ ಗಿಲಿ, ಹ್ರದಯ ಢವ ಢವ, ಬಯಕೆ ಎದೆಯಲಿ.
ಮನಸು ಮಲ್ಲಿಗೆ,ಮೊಗ ಚೆಂದಿರ, ಬಳಿಗೆ ಬರಲು, ಮನವು ಚಿತ್ತಾರ. ಮೂಗು ಸಂಪಿಗೆ,ಮೈಯ ಕಂಪಿಗೆ, ದೇಹದಿಂಪಿಗೆ, ಸೋತೆ ಮೆಲ್ಲಗೆ. ಮಾತು ಮೆಲ್ಲಗೆ,ಮೈಯ್ಯಿ ಸೋತಿರೆ, ಮಂಚ ಕಾದಿದೆ, ಬಾರೆ ತೋಳಿಗೆ ನನ್ನ ಚೆಂದಿರೆ.
Posted by
ಮೌನಿ
Wednesday, April 15, 2009
at
7:42 PM

ಮುಸ್ಸಂಜೆಯಲ್ಲಿ ನಲ್ಲನಾ ಸವಿ ನೆನಪು
ಗೋಧೂಳಿ ಹರಡಿದೆ,ಮಲ್ಲಿಗೆಯ ಕಂಪು
ಮುಂಬಾಗಿಲಲ್ಲಿ ಕಾಯುವ ಸಡಗರ
ಸದ್ದು ಸದ್ದಿಗೂ ಆಸೆ ನಿನ್ನಾಗಮನ
ಪರಿತಪಿಸಿ ಸಂದ ದಿನಗಳೆಂತೊ
ತಡೆಯಲಾರದೆ ಕಾಮನಾ ಬಾಣಗಳೆಂತೊ
ಅಂದೆಂದೋ ಉಸುರಿದಾ ಮಾತುಗಳ
ಹಿಡಿಮುಶ್ಟಿ ಕಟ್ಟಿ ಎದೆಗವಚಿಕೊಂಡಿರುವೆ
ಇಂದಿಗೂ ನೆಟ್ಟ ನೋಟ,ಕಣ್ಣ ಹನಿಗಳೊಂದಿಗೆ
ಆಸೆಗಳು ಚೂರಾಗದು,ನಿಲ್ಲಿಸೆ ಹಚ್ಹುವಾ ಹಣತೆಗಳ
ನೀ ಬಂದು ನನಸಾಗಿಸು ನನ್ನೀ ಕನಸುಗಳ
ಸೂಸಿತು ನಗು ನೆನಪಾಗಿ ನಿನ್ನ ಬಾಹು ಭಂದಗಳ
Posted by
ಮೌನಿ
Sunday, April 5, 2009
at
5:17 PM
ಅದುಮಿಟ್ಟ ಭಾವನೆಗಳೊಂದಿಗೆ
ಭವಿತವ್ಯದ ಕನಸು ಕಟ್ಟಿದರೆ,
ಬದುಕು....
ಬರಡಾಗದೆ-ಮರ್ಮಜ್ಞ.
Posted by
ಮೌನಿ
at
12:22 PM
ಯಾವತ್ತೂ ನಾನು ಬೇಡ ಅಂದುಕೊಂದದ್ದೇ ನಡೆಯುತ್ತೆ...ಇವತ್ತೂ ಹಾಗೇ ಆಯಿತು.ನಾನು ಮೈಸೂರ್ ನಿಂದ ಬೆಂಗಳೂರ್ ಗೆ ಬರುವ ವೋಲ್ವೋ ಹತ್ತಿದ್ದೆ.ಸ್ವಲ್ಪ ಹೊತ್ತಿಗೆ ಹೊರಟಿತು.ಟಿಕೆಟ್ ಎಲ್ಲ ಮಾಡಿದ ಕಂಡಕ್ಟರ್ ಮುಂದೆ ಬಂದು ಯಾವುದೋ ಒಂದು ಫಿಲ್ಮ್ ನ ಸಿಡಿ ಹಾಕಿದ.ಅದೇನೆನ್ನಿಸಿತೋ ದರಿದ್ರದವನಿಗೆ....ಅದನ್ನು ತೆಗೆದು "ಮುಂಗಾರು ಮಳೆ" ಹಾಕಿದ. ಇವತ್ತಿನ ವರೆಗೂ ನೋಡಿರಲಿಲ್ಲ...ಚೆನ್ನಾಗಿಲ್ಲ ಅಂತಲ್ಲ.ಬೇರೆಯದೇ ಕಾರಣಕ್ಕೆ ನೋಡಬಾರದೆಂದುಕೊಂಡಿದ್ದೆ. "ಏಯ್ ನಾನು ನೀನು ಹೋಗ್ ನೋಡ್ವನ" ಅಂತ ಹೇಳಿದ್ದ ನನ್ನ ಗೆಳೆಯ.ಇವತ್ತಿನ ವರೆಗೂ ಕಾದಿದ್ದೆ.ಎರಡು ವರ್ಷವಾಯಿತು ಅವನ ಜೊತೆಗೆ ನೋಡಲು ಸಾಧ್ಯವಿಲ್ಲ ಎನ್ನುವುದೂ ಗೊತ್ತಿದೆ.......ಹೌದು ಅವನು ನಮ್ಮನ್ನಗಲಿ ಎರಡು ವರ್ಷವಾಯಿತು. ಪಾಪಿ ಕಂಡಕ್ಟರ್ ಸರಿ ಸಂಜೆ ಹೊತ್ತಲ್ಲಿ ಹಳೆಯದೆಲ್ಲವನ್ನೂ ಕೆರೆದು ಗಾಯವಾಗುವಂತೆ ಮಾಡಿದ್ದ.ಉಹುಂ ಅವನ ನೆನಪು ಅಳಿಸಿ ಹಾಕುವಂಥದ್ದಲ್ಲ.ಹೇಗೆ ಮರೆಯಲಿ ನಿನ್ನ,
ಹೆಜ್ಜೆ ಮೂಡಿಸಿದ ಗೆಳೆಯ.
ವದ್ದೆಯಾಗಿದೆ ಹೃದಯ,
ಮನದ ರೋದನೆಗೆ.....ಕೊನೆಗೂ ಅವನಿಲ್ಲದೆ ನೋಡುವಂತಾಯಿತು...ಅದೂ ಅರ್ಧ ಮಾತ್ರ...ಮೈಸೂರ್ ರೋಡಿನ ಬಿ.ಹೆಚ್.ಈ.ಎಲ್ ಹತ್ತಿರ ಬಂದಾಗ,ರೋಡು ತುಂಬಿ ತುಳುಕುತ್ತಿತ್ತು.ನಮ್ಮ ಬಸ್ಸಿಗೂ ಉಸಿರು ಕಟ್ಟಿತೋ ಏನೋ,ಬಂದು ಬಿದ್ದಿತು. ಆವಾಗ ತಾನೇ ಗಣೇಶ್ ಈ ಸಾಲನ್ನು ಹೇಳಿ ಮುಗಿಸಿದ್ದ...."ಹೃದಯದಲ್ಲಿ ಇಷ್ಟೊಂದು ನೋವನ್ನಿಟ್ಕೊಂಡು ನಾನು ಬದ್ಕತೀನ ದೇವದಾಸು?"ನನ್ನ ಗೆಳೆಯ ಕೂಡ ಅಷ್ಟೊಂದು ನೋವನ್ನುಂಡಿದ್ನಾ? ಗೊತ್ತಿಲ್ಲ.... ಮನದ ರೋದನೆಗೆ ಹೃದಯ ಹಸಿಯಾಗಿದ್ದಂತೂ ಸತ್ಯ.
Posted by
ಮೌನಿ
at
12:21 PM
ಮನವು ಮುಳ್ಳಾಗಿಹುದು,ಹೃದಯವು ಒಡೆದು.ಮನತಣಿಸುವ ಮನದನ್ನೆ ಬರಲು,ಬರ್ಬರ ಬದುಕು ಹಸನಾಗುವುದೇ-ಮರ್ಮಜ್ಞ.